ಬೆಂಗಳೂರು ನಗರದಲ್ಲಿ ಎಲೆಗಳ ಕಸದ ರಾಶಿಗೆ ಬೆಂಕಿ: ಸುತ್ತಲಿನ ನಿವಾಸಿಗಳಿಗೆ ತಲೆನೋವು

KannadaprabhaNewsNetwork |  
Published : Mar 04, 2026, 04:00 AM IST
ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆಯ ಫುಟ್‌ಪಾತ್‌ನಲ್ಲಿ ಒಣ ಎಲೆಗಳ ರಾಶಿ. | Kannada Prabha

ಸಾರಾಂಶ

ವಸಂತ ಕಾಲದ ಮುಕ್ತಾಯದೊಂದಿಗೆ ಬೆಂಗಳೂರಿನ ಮರಗಳು ಹೊಸ ಚಿಗುರು ಪಡೆಯುತ್ತಿವೆಯಾದರೂ, ಬೀದಿಗಳಲ್ಲಿ ಉದುರಿ ಬೀಳುತ್ತಿರುವ ಒಣಗಿದ ಎಲೆಗಳ ವಿಲೇವಾರಿ ನಗರಕ್ಕೆ ತಲೆನೋವಾಗಿ ಪರಿಣಮಿಸಿದೆ.

ವಿಶೇಷ ವರದಿಕನ್ನಡಪ್ರಭ ವಾರ್ತೆ ಬೆಂಗಳೂರ

ವಸಂತ ಕಾಲದ ಮುಕ್ತಾಯದೊಂದಿಗೆ ಬೆಂಗಳೂರಿನ ಮರಗಳು ಹೊಸ ಚಿಗುರು ಪಡೆಯುತ್ತಿವೆಯಾದರೂ, ಬೀದಿಗಳಲ್ಲಿ ಉದುರಿ ಬೀಳುತ್ತಿರುವ ಒಣಗಿದ ಎಲೆಗಳ ವಿಲೇವಾರಿ ನಗರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಎಲೆಗಳನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸುವುದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ರಸ್ತೆ ಬದಿಯಲ್ಲೇ ಗುಡ್ಡೆ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.ಸಂಜಯ್ ನಗರ, ಡಾಲರ್ಸ್ ಕಾಲೋನಿ, ವಿ.ವಿ. ಪುರ, ಮಹಾಲಕ್ಷ್ಮೀ ಲೇಔಟ್, ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಎಚ್.ಎಸ್.ಆರ್. ಲೇಔಟ್, ಇಂದಿರಾನಗರ, ಜೆ.ಪಿ ನಗರ ಸೇರಿ ನಗರದ ಹಲವು ಬಡಾವಣೆಗಳಲ್ಲಿ ರಾತ್ರಿ ಮತ್ತು ಬೆಳಗಿನ ಅವಧಿಯಲ್ಲಿ ಎಲೆಗಳ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಕಸ ಸಂಗ್ರಹಿಸುವ ವಾಹನಗಳು ಎಲೆಗಳ ರಾಶಿಯನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಹಾಗೆಯೇ ಕೆಲವೆಡೆ ಕಸ ಗುತ್ತಿಗೆದಾರರೇ ಎಲೆಗಳ ರಾಶಿಗೆ ಬೆಂಕಿ ಹಾಕುತ್ತಿದ್ದಾರೆ.

ಹಾವು, ಹುಳುಗಳ ಕಾಟ: ಒಣಗಿದ ಎಲೆಗಳ ರಾಶಿಯಲ್ಲಿ ಹಾವುಗಳು, ಹುಳುಗಳು ಸೇರಿಕೊಳ್ಳುವುದರಿಂದ ಜನರ ಜೀವಕ್ಕೆ ಅಪಾಯವಾಗುತ್ತಿದೆ. ಎಲೆಗಳ ರಾಶಿಯೊಳಗೆ ಆಹಾರ ಅರಸಿ ಇಲಿಗಳು ಹಾಗೂ ಇನ್ನಿತರ ಕೀಟಗಳು ಸೇರಿಕೊಳ್ಳುತ್ತವೆ. ಅವುಗಳ ಬೇಟೆಗೆ ಹಾವುಗಳು ಬರುತ್ತವೆ. ನಗರದ ಹೊರ ವಲಯಗಳಲ್ಲಿ ಬೀಳುವ ಎಲೆಗಳ ರಾಶಿಯಲ್ಲಿ ಹಾವುಗಳು ಹೆಚ್ಚಾಗಿ ಕಂಡು ಬರುತ್ತಿವೆ.ಮರಗಳ ಕೆಳಗೆ ಬಿದ್ದಿರುವ ಎಲೆಗಳ ರಾಶಿಯನ್ನು ಕಸದ ಜೊತೆಗೆ ಬಳಿಯುವ ಪೌರ ಕಾರ್ಮಿಕರು ಫುಟ್‌ಪಾತ್ ಮೇಲೆ ಅಥವಾ ಅದೇ ಜಾಗದಲ್ಲಿ ಗುಡ್ಡೆ ಹಾಕುತ್ತಾರೆ. ಅದನ್ನು ಕಸ ಸಾಗಿಸುವ ವಾಹನಗಳು ಸಾಗಣೆ ಮಾಡುವುದಿಲ್ಲ. ಜನರು ಓಡಾಡುವಾಗ ಹಾವುಗಳು ಕಚ್ಚುವ ಆತಂಕವು ಇದೆ.

ಆರೋಗ್ಯದ ಮೇಲೆ ದುಷ್ಪರಿಣಾಮ: ಒಣ ಎಲೆಗಳನ್ನು ಸುಡುವುದರಿಂದ ಅಕ್ಕ ಪಕ್ಕದಲ್ಲಿ ವಾಸವಿರುವವರು, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಹೊಗೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ನಗರದ ಪರಿಸರ, ವಾತಾವರಣವು ಹಾಳಾಗುತ್ತಿದೆ. ಎಲೆಗಳ ಜೊತೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸೇರಿಸಿ ಬೆಂಕಿ ಹಚ್ಚುತ್ತಿರುವುದು ನಗರದ ಅನೇಕ ಕಡೆ ಕಂಡು ಬರುತ್ತಿದೆ. ಇದು ಜನರ ಆರೋಗ್ಯದ ಹೆಚ್ಚು ದುಷ್ಪರಿಣಾಮ ಉಂಟು ಮಾಡುತ್ತಿದೆ.ಜಿಬಿಎ ಸಿಬ್ಬಂದಿ ನಿರ್ಲಕ್ಷ್ಯ: ವಸಂತ ಕಾಲದಲ್ಲಿ ಮರಗಳ ಎಲೆಗಳು ಉದುರುವುದು ನೈಸರ್ಗಿಕ ಪ್ರಕ್ರಿಯೆ. ಹೀಗಾಗಿ, ರಾಶಿ ರಾಶಿ ಎಲೆಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆದರೆ, ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಎಲೆಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅನೇಕ ಪ್ರದೇಶಗಳಲ್ಲಿ ಎಲೆಗಳ ರಾಶಿಯನ್ನು ಎಲ್ಲೆಂದರಲ್ಲೇ ಬಿಡಲಾಗುತ್ತಿದೆ. ಈ ಕಸದಿಂದ ಮುಕ್ತಿ ಪಡೆಯಬೇಕು ಎಂದು ಕೆಲವೆಡೆ ಸಾರ್ವಜನಿಕರೇ ಬೆಂಕಿ ಹಚ್ಚುತ್ತಿದ್ದಾರೆ.

ಕಾಂಪೋಸ್ಟ್ ಮಾಡಬೇಕು: ಉದ್ಯಾನಗಳಿಗೆ, ಮರಗಳಿಗೆ ಎಲೆಗಳು ಬೇಕು. ಉದುರಿ ಬೀಳುವ ಎಲೆಗಳನ್ನು ಕಾಂಪೋಸ್ಟ್ ಗೊಬ್ಬರ ಮಾಡಲು ಬಳಸಬೇಕು. ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ನಗರದ ವಿವಿಧೆಡೆ ಉದ್ಯಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಾಂಪೋಸ್ಟ್ ಮಾಡುವ ಪ್ರಯತ್ನಗಳು ನಡೆದಿವೆ. ನಾಗರಿಕ ಕಾರ್ಯಕರ್ತರು ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಈ ಚಟುವಟಿಕೆ ಚೆನ್ನಾಗಿದೆ. ಉಳಿದೆಡೆ ಉತ್ತಮವಾಗಿಲ್ಲ ಎಂದು ಹಸಿರು ದಳದ ಸಂಸ್ಥಾಪಕಿ ನಳಿನಿ ಶೇಖರ್ ಹೇಳಿದರು.

ನಗರದ ಅನೇಕ ಕಡೆಗಳಲ್ಲಿ ಕಾಂಪೋಸ್ಟ್ ಗೊಬ್ಬರ ಮಾಡುವ ಪ್ರಕ್ರಿಯೆ ನಡೆಯುತ್ತಿಲ್ಲ. ಉತ್ತಮ ಪರಿಸರಕ್ಕಾಗಿ ಎಲೆಗಳನ್ನು ಗೊಬ್ಬರ ಮಾಡುವ ಪ್ರಕ್ರಿಯೆಗೆ ಜಿಬಿಎ ವೇಗ ನೀಡಬೇಕು. ನಗರದ ಎಲ್ಲಾ ಭಾಗಗಳಲ್ಲಿ ಈ ನಿಟ್ಟಿನಲ್ಲಿ ಕೆಲಸಗಳು ಆಗಬೇಕು ಎಂದು ನಳಿನಿ ಶೇಖರ್ ಹೇಳಿದರು.

ಒಣಗಿದ ಎಲೆಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಕ್ರಿಯೆಗೆ ಪಾಲಿಕೆಗಳು ಒತ್ತು ನೀಡಬೇಕು. ನಗರದ ಎಲ್ಲಾ ಕಡೆಗಳಲ್ಲಿ ಈ ಪ್ರಕ್ರಿಯೆ ಆಗಬೇಕು.

- ನಳಿನಿ ಶೇಖರ್, ಸಂಸ್ಥಾಪಕಿ, ಹಸಿರು ದಳ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರಾಜಧಾನಿಯಲ್ಲಿ ನಿಲ್ಲದ ಡ್ರಗ್ಸ್ ದಂಧೆ : ಪೊಲೀಸರಿಂದ ₹24.5 ಕೋಟಿಯ ಗಾಂಜಾ ಜಪ್ತಿ
28 ಪ್ರಮುಖ ಮುಖಂಡರೊಂದಿಗೆ ಸುದೀರ್ಘ ಮಾತುಕತೆ : ಎಚ್‌.ಡಿ.ಕುಮಾರಸ್ವಾಮಿ ಮಹತ್ವದ ಸೂಚನೆ