ಪದೇ ಪದೇ ಡ್ರಗ್ಸ್‌ ಕೇಸಲ್ಲಿ ಫಿಟ್‌: ಪಿಐಟಿ-ಎನ್ಡಿಪಿಎಸ್‌ ಅಡಿ ಬಂಧನ

KannadaprabhaNewsNetwork |  
Published : Feb 22, 2024, 01:45 AM IST
Amirkhan | Kannada Prabha

ಸಾರಾಂಶ

ಪದೇ ಪದೇ ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿಬೀಳುತ್ತಿದ್ದ ಆರೋಪಿ ಅಮೀರ್‌ಖಾನ್‌ ವಿರುದ್ಧ ಪೊಲೀಸರು ಕಠಿಣ ಕಾಯ್ದೆ ಪ್ರಯೋಗಿಸಿದ್ದಾರೆ. ಈ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಜಾಮೀನು ಸಿಗಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪದೇ ಪದೇ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಮಾದಕವಸ್ತುಗಳ ಅಕ್ರಮ ಸಾಗಾಣೆ ತಡೆ ಕಾಯ್ದೆ(ಪಿಐಟಿ-ಎನ್‌ಡಿಪಿಎಸ್‌) ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

ರಿಚ್ಮಂಡ್‌ ಟೌನ್‌ನ ಅಮೀರ್‌ ಖಾನ್‌ (35) ಬಂಧಿತ ಡ್ರಗ್ಸ್‌ ಪೆಡ್ಲರ್‌. ಈತ ಕಳೆದ ಮೂರು ವರ್ಷಗಳಿಂದ ಕೇರಳ ಮತ್ತು ಆಂಧ್ರಪ್ರದೇಶದಿಂದ ಗಾಂಜಾ ಮತ್ತು ಇತರೆ ಮಾದಕವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈ ಹಿಂದೆ ಸಿಸಿಬಿ ಪೊಲೀಸರು ಮೂರು ಬಾರಿ ಮಾಲು ಸಹಿತ ಬಂಧಿಸಿದ್ದರು. ಅಶೋಕನಗರ, ಪರಪ್ಪನ ಅಗ್ರಹಾರ, ಬೇಗೂರು, ಗೋವಿಂದಪುರ ಪೊಲೀಸ್‌ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿತ್ತು.

ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಮಾದಕವಸ್ತು ಮಾರಾಟ ದಂಧೆ ಮುಂದುವರೆಸಿದ್ದ. 2021ರಿಂದ 2023ರ ರವರೆಗೆ ಈತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಅಮಿರ್‌ ಖಾನ್‌ನನ್ನು ಬಂಧಿಸಿದ್ದರು. ಈಶಾನ್ಯ ವಿಭಾಗದ ಡಿಸಿಪಿ ಅವರ ಸೂಚನೆ ಮೇರೆಗೆ ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರತಿಬಂಧಕ ಬಂಧನದಲ್ಲಿರಿಸಲು ಪೂರಕ ದಾಖಲೆಗಳೊಂದಿಗೆ ಪೊಲೀಸ್‌ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ನಗರ ಪೊಲೀಸ್‌ ಆಯುಕ್ತರು ಈತನ ಬಂಧನಕ್ಕೆ ಆದೇಶಿಸಿದ್ದರು. ಈ ಆದೇಶದ ಮೇರೆಗೆ ಅಮೃತಹಳ್ಳಿ ಠಾಣೆ ಪೊಲೀಸರು ಫೆ.19ರಿಂದ ಅನ್ವಯವಾಗುವಂತೆ ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರತಿಬಂಧಕ ಬಂಧನ ಜಾರಿಗೊಳಿಸಿದ್ದಾರೆ.ಏನಿದು ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆ?

ಪದೇ ಪದೇ ಮಾದಕವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗುವ ರೂಢಿಗತ ಡ್ರಗ್ಸ್‌ ಪೆಡ್ಲರ್‌ಗಳನ್ನು ನಿಯಂತ್ರಿಸಲು ಮಾದಕವಸ್ತುಗಳ ಅಕ್ರಮ ಸಾಗಾಣೆ ತಡೆ ಕಾಯ್ದೆ(ಪಿಐಟಿ-ಎನ್‌ಡಿಪಿಎಸ್‌) ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದರೆ ಗೂಂಡಾ ಕಾಯ್ದೆ ಮಾದರಿಯಲ್ಲಿ ಆರೋಪಿಗೆ ಕನಿಷ್ಠ 1 ವರ್ಷ ಜಾಮೀನು ಸಿಗುವುದಿಲ್ಲ. ಹೀಗಾಗಿ ಆರೋಪಿಯು ಒಂದು ವರ್ಷದ ಜೈಲಿನಲ್ಲೇ ಇರಬೇಕಾಗುತ್ತದೆ.

PREV

Recommended Stories

ಪ್ರಶಸ್ತಿ ಕೊಡಿಸುವುದಾಗಿ ಅಪ್ರಾಪ್ತೆಗೆ ಯೋಗ ಗುರು ಲೈಂ*ಕ ಕಿರುಕುಳ : ಬಂಧನ
ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಮೂವರ ಬಂಧನ