ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತರಪ್ರದೇಶ ರಾಜ್ಯದ ಲಖನೌ ಮೂಲದ ಆದರ್ಶ ಕುಮಾರ್ ಸಿಂಗ್ ಬಂಧಿತನಾಗಿದ್ದು, ಇತ್ತೀಚೆಗೆ ಬೆಂಗಳೂರಿನಿಂದ ಲಖನೌಗೆ ತೆರಳುವಾಗ ವಿಮಾನದಲ್ಲಿ ಆತ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಆತನನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ಮಂಜೂರು ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಪೊಲೀಸ್ ಪುತ್ರನ ಉಗ್ರ ರಗಳೆ:ಉತ್ತರಪ್ರದೇಶ ರಾಜ್ಯದ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಪುತ್ರನಾದ ಆದರ್ಶ, ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ. ವೈಯಕ್ತಿಕ ಕೆಲಸದ ಮೇರೆಗೆ ತನ್ನೂರಿಗೆ ವಿಮಾನದಲ್ಲಿ ತೆರಳಲು ಫೆ.17ರಂದು ಕೆಐಎಗೆ ಆತ ಬಂದಿದ್ದ. ಆ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮುಗಿಸಿ ನಿಗದಿತ ಸಮಯಕ್ಕೆ ಏರ್ ಇಂಡಿಯಾ ವಿಮಾನದೊಳಗೆ ಪ್ರವೇಶಿಸಿ ಕುಳಿತಿದ್ದ. ಇನ್ನೇನು ವಿಮಾನ ಹೊರಡಬೇಕು ಎನ್ನುವಾಗ ಏಕಾಏಕಿ ತಾನು ಹೊರ ಹೋಗಬೇಕೆಂದು ಕೋರಿದ್ದಾನೆ. ಆಗ ಆತನನ್ನು ವಿಮಾನದಿಂದ ಸಿಬ್ಬಂದಿ ಹೊರ ಕಳುಹಿಸಿದ್ದಾರೆ. ಟೇಕ್ ಆಫ್ ಆಗುವ ಹಂತದಲ್ಲಿ ವಿಮಾನದಿಂದ ಹೊರಬಂದ ಆದರ್ಶನನ್ನು ಸಿಐಎಸ್‌ಎಫ್ ಸಿಬ್ಬಂದಿ ವಿಚಾರಣೆಗೆ ಮುಂದಾಗಿದ್ದಾರೆ.
ಖಾಸಗಿ ಕಾಲೇಜಿನ ಪದವಿ ಓದುತ್ತಿದ್ದ ಆದರ್ಶ್, ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸಿರಲಿಲ್ಲ. ಅಲ್ಲದೆ ತಾನು ಪ್ರೀತಿಸುತ್ತಿದ್ದ ಯುವತಿ ಸಹ ಆತನಿಂದ ದೂರವಾಗಲು ಮುಂದಾಗಿದ್ದಳು. ಈ ವೈಯಕ್ತಿಕ ಸಮಸ್ಯೆಗಳಿಂದ ಬೇಸರಗೊಂಡು ಈ ರೀತಿ ವರ್ತನೆ ತೋರಿರುವುದಾಗಿ ವಿಚಾರಣೆ ವೇಳೆ ಆತ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.