ಮಚ್ಚಿನಿಂದ ಹಲ್ಲೆಗೈದು ಕೊಲೆಗೆ ಪ್ರಯತ್ನ: ಐವರು ಆರೋಪಿಗಳ ಬಂಧನ

KannadaprabhaNewsNetwork |  
Published : Sep 22, 2025, 02:03 AM IST
ZAID BASHA | Kannada Prabha

ಸಾರಾಂಶ

ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರದ ನಿವಾಸಿಗಳಾದ ಅಫ್ಜಲ್‌ ಖಾನ್ (36), ಸೈಯದ್ ವಸೀಂ(26), ಜಾಯಿದ್ ಬಾಷಾ (33), ಸೈಯದ್ ಹಫೀಜ್(24) ಮತ್ತು ಸಲೀಂ ಪಾಷ(37) ಬಂಧಿತರು.

ಆರೋಪಿಗಳು ಶನಿವಾರ ರಾತ್ರಿ ಸುಮಾರು 8.30ಕ್ಕೆ ಮಲ್ಲೇಶ್ವರದ ಎಂ.ಡಿ.ಬ್ಲಾಕ್‌ನ 4ನೇ ಮುಖ್ಯರಸ್ತೆಯ ಸ್ಟಾರ್‌ ಟೀ ಅಂಗಡಿ ಬಳಿ ಸ್ಥಳೀಯ ನಿವಾಸಿ ಮೊಹಮ್ಮದ್‌ ಜಾವೀದ್‌ (32) ಜತೆಗೆ ಜಗಳ ತೆಗೆದು ಮಟನ್‌ ಕತ್ತರಿಸುವ ಮಚ್ಚಿನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ದೂರುದಾರ ಮೊಹಮ್ಮದ್‌ ಹಾಗೂ ಆರೋಪಿಗಳು ನೆರೆಹೊರೆಯ ನಿವಾಸಿಗಳು. ಜಾವೀದ್‌ ಹಾಗೂ ಅಫ್ಜಲ್‌ ನಡುವೆ ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಶನಿವಾರ ರಾತ್ರಿ 8.30ಕ್ಕೆ ಜಾವೀದ್‌ ಟೀ ಅಂಗಡಿ ಬಳಿ ನಿಂತಿರುವಾಗ, ಅಫ್ಜಲ್‌ ಅಲ್ಲಿಗೆ ಬಂದಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಆಗ ಉಳಿದ ಆರೋಪಿಗಳು ಅಫ್ಜಲ್‌ ಪರವಹಿಸಿ ಜಾವೀದ್‌ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸಮಯಕ್ಕೆ ಅಫ್ಜಲ್‌ ಪಕ್ಕದಲ್ಲೇ ಇದ್ದ ಮಟನ್‌ ಅಂಗಡಿಯಿಂದ ಮಚ್ಚನ್ನು ತಂದು ಏಕಾಏಕಿ ಜಾವೀದ್‌ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡ ಜಾವೀದ್‌ ಕುಸಿದು ರಸ್ತೆಗೆ ಬಿದ್ದಿದ್ದಾನೆ. ಬಳಿಕ ಐವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳೀಯರ ನೆರವಿನಿಂದ ಜಾವೀದ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ಜಾವೀದ್‌ ತಂದೆ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ತಾಸಿನೊಳಗೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ
ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ