ಸಾಮೂಹಿಕ ಅತ್ಯಾಚಾರ ಕೃತ್ಯದ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರಿಗೆ ಗಾಳ ಹಾಕಿ ಬಳಿಕ ಮೋಜು ಮಸ್ತಿ ಪಾರ್ಟಿಗಳಿಗೆ ಆಹ್ವಾನಿಸಿ ಲೈಂಗಿಕ ಶೋಷಣೆ ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವೊಂದು ಇದೆ ಎಂಬ ಗುಮಾನಿ ಅಮೃತಹಳ್ಳಿ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮೂಹಿಕ ಅತ್ಯಾಚಾರ ಕೃತ್ಯದ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರಿಗೆ ಗಾಳ ಹಾಕಿ ಬಳಿಕ ಮೋಜು ಮಸ್ತಿ ಪಾರ್ಟಿಗಳಿಗೆ ಆಹ್ವಾನಿಸಿ ಲೈಂಗಿಕ ಶೋಷಣೆ ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವೊಂದು ಇದೆ ಎಂಬ ಗುಮಾನಿ ಅಮೃತಹಳ್ಳಿ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಈ ಅತ್ಯಾಚಾರ ಪ್ರಕರಣದ ಆರೋಪಿಗಳಾದ ನಿಖಿಲ್ ಮತ್ತು ಡಿಕ್ಸನ್‌ನ ಸಂಪರ್ಕ ಜಾಲವನ್ನು ಜಾಲಾಡಿದಾಗ ಮೋಜು ಮಸ್ತಿ ಪಾರ್ಟಿ ಆಯೋಜನೆ ಸಂಗತಿ ಬಯಲಾಗಿದೆ. ಆರೋಪಿಗಳಿಂದ ಮತ್ತಷ್ಟು ಯುವತಿಯರು ದೌರ್ಜನ್ಯಕ್ಕೊಳಗಾಗಿರುವ ಸುಳಿವು ಸಿಕ್ಕಿದ ಬೆನ್ನಲ್ಲೇ ಪೊಲೀಸರ ತನಿಖೆ ಚುರುಕಾಗಿದ್ದು, ಸಂತ್ರಸ್ತೆಯರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನು ನಿಖಿಲ್ ಹಾಗೂ ಡಿಕ್ಸನ್‌ ಪರಿಚಯಿಸಿಕೊಳ್ಳುತ್ತಿದ್ದರು. ಅನಂತರ ವಿಕೆಂಡ್‌ಗಳಲ್ಲಿ ನಗರದ ಹೊರವಲಯದ ವಿಲ್ಲಾ ಸೇರಿ ಇತರೆಡೆ ಪಾರ್ಟಿ ಆಯೋಜಿಸಿ ತಮ್ಮ ಸೋಶಿಯಲ್ ಮೀಡಿಯಾದ ಗೆಳತಿಯರನ್ನು ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಆಗ ಮತ್ತು ಭರಿಸುವ ಅಥವಾ ನಿಷೇಧಿತ ವಸ್ತು ಬೆರೆಸಿದ ಪಾನಿಯಗಳನ್ನು ಪೂರೈಸಿ ಯುವತಿಯರ ಮೈ ಮರೆಸುತ್ತಿದ್ದರು. ಅರೆ ಪ್ರಜ್ಞಾರಾದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ ಆ ಕೃತ್ಯದ ವಿಡಿಯೋವನ್ನು ಮಾಡಿಕೊಂಡು ಸಂತ್ರಸ್ತೆಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಆರೋಪಗಳು ಕೇಳಿ ಬಂದಿವೆ.

ಡ್ರಗ್ಸ್ ಕೊಡುತ್ತಿದ್ದರು-ಸಂತ್ರಸ್ತೆ ಆರೋಪ:

ನನಗೆ ಇನ್‌ಸ್ಟಾಗ್ರಾಂ ಮೂಲಕ ಡಿಕ್ಸನ್‌ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ನನಗೆ ಜಾಹೀರಾತುವೊಂದರ ಪ್ರಚಾರಕ್ಕೆ ಫೋಟೋಶೂಟ್‌ಗೆ ಬರುವಂತೆ ಆತ ವಿನಂತಿಸಿದ. ಆದರೆ, ಈ ಪ್ರಸ್ತಾಪ ತಿರಸ್ಕರಿಸಿದೆ ಎಂದು ಸಾಮಾಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೇಳಿದ್ದಾರೆ.

ಪ್ರತಿದಿನ ನನಗೆ ನಿರಂತವಾಗಿ ಆತ ಮೆಸೇಜ್ ಮಾಡುತ್ತಿದ್ದ. ಆದರೆ, ನಾನು ನಿರ್ಲಕ್ಷ್ಯಿಸಿದೆ. ಪದೇ ಪದೇ ವಿನಂತಿಸಿದ ಬಳಿಕ ನಾನು ಆತನೊಟ್ಟಿಗೆ ಮಾತನಾಡಿದೆ. ಆತನ ಜತೆ ಆತ್ಮೀಯತೆ ಬೆಳೆಯಿತು. ಕೋರಮಂಗಲದ ಪಬ್‌ನಲ್ಲಿ ಡಿಕ್ಸನ್‌ನನ್ನು ಎರಡು ಬಾರಿ ಭೇಟಿ ಸಹ ಮಾಡಿದ್ದೆ. ಆಗ ಆತ ಸಭ್ಯತೆಯಿಂದ ನಡೆದುಕೊಂಡಿದ್ದ ಎಂದು ತಿಳಿಸಿದ್ದಾರೆ.

ತನ್ನ ಜೊತೆಗೆ ಚೆನ್ನಾಗಿದ್ದ. ಮೂರನೇ ಬಾರಿ ಪಾರ್ಟಿ ಮುಗಿದ ಬಳಿಕ ಆಫ್ಟರ್ ಪಾರ್ಟಿಗೆ ಎಂದು ಕರೆದಿದ್ದ. ಆ ಪಾರ್ಟಿಯಲ್ಲಿ ಬಹಳ ಹುಡುಗಿಯರು ಇರುತ್ತಾರೆ. ಏನು ತೊಂದರೆ ಇಲ್ಲ. ಸುರಕ್ಷತೆ ಇರುತ್ತೆ ಬರುವಂತೆ ಆತ ಆಹ್ವಾನಿಸಿದ. ನಾನು ಆತನ ಮಾತು ನಂಬಿ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಯಲ್ಲಿ ನನಗೆ ನಿಖಿಲ್‌ ಪರಿಚಯವಾಯಿತು ಎಂದು ವಿವರಿಸಿದ್ದಾರೆ.

ನನಗೆ ಮೊದಲು ನಿಖಿಲ್ ಪರಿಚಯವಿರಲಿಲ್ಲ. ಈತನ ಬಗ್ಗೆ ಡಿಕ್ಸನ್‌ ಹೇಳಿದ್ದು ನೆನಪಿತ್ತು. ಆ ಪಾರ್ಟಿಯಲ್ಲಿ ಊಟ ಮಾಡಿದೆ. ಸಂಗೀತಕ್ಕೆ ನೃತ್ಯ ಎಲ್ಲ ಇತ್ತು. ಪಾರ್ಟಿ ಮುಗಿದ ಬಳಿಕ ನನ್ನ ಜತೆ ಆ ಇಬ್ಬರು ಅಸಭ್ಯವಾಗಿ ನಡೆದುಕೊಂಡರು. ನನ್ನ ಮೇಲೆ ಶೋಷಣೆ ನಡೆಯಿತು ಎಂದು ಸಂತ್ರಸ್ತೆ ದೂರಿದ್ದಾರೆ. ನಾನು ಆ ಇಬ್ಬರ ಬಳಿ ಹಣ ಕೇಳಿಲ್ಲ. ಹೀಗಿದ್ದರೂ ನನ್ನ ಮೇಲೆ ಮಲ್ಲೇಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದರು. ಅಮೃತಹಳ್ಳಿ ವಿಲ್ಲಾದ ಪಾರ್ಟಿಯಲ್ಲಿ ಡ್ರಗ್ಸ್ ಸಹ ಇತ್ತು. ನಾನು ವಿರೋಧಿಸಿದರೂ ಬಾಯಿಗೆ ಬಲವಂತವಾಗಿ ತಿನ್ನಿಸಿದರು. ನನಗೆ ಇನ್ನು 19 ವರ್ಷ ವಯಸ್ಸು. ನಾನು ಡಿಕ್ಸನ್‌ನನ್ನು ನಂಬಿ ಹೋಗಿದ್ದೆ. ಆತ ರಿಲೆಶನ್‌ಶಿಪ್ ಶರುವಾಗುವ ಮೊದಲೇ ಹೀಗೆ ಮಾಡಿದೆ. ನನಗೆ ನ್ಯಾಯ ಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಸರ್ಕಾರಿ ಅಧಿಕಾರಿ ಮಾಲಿಕತ್ವದ ವಿಲ್ಲಾ?

ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿರುವ ವಿಲ್ಲಾವು ಸರ್ಕಾರಿ ಅಧಿಕಾರಿಯೊಬ್ಬರಿಗೆ ಸೇರಿದ್ದು, ಪಾರ್ಟಿಗೆ ನಿಖಿಲ್ ಬಾಡಿಗೆ ಪಡೆದಿದ್ದ ಎಂಬ ಮಾತುಗಳು ಕೇಳಿ ಬಂದಿವೆ. ನಾವು ಬಾಡಿಗೆ ಪಡೆದಿರುವ ಮಾಹಿತಿ ಕಲೆ ಹಾಕಿದ್ದೇವೆ. ಇದುವರೆಗೆ ಆ ಕಟ್ಟಡದ ಮಾಲಿಕರ ವಿವರ ಸಿಕ್ಕಿಲ್ಲ. ಈ ಸಂಬಂಧ ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದುವರೆಗೆ ಅಮೃತಹಳ್ಳಿ ಠಾಣೆಯಲ್ಲಿ ಓರ್ವ ಸಂತ್ರಸ್ತೆ ಮಾತ್ರ ದೂರು ನೀಡಿದ್ದಾರೆ. ಅದರನ್ವಯ ಇಬ್ಬರು ಆರೋಪಿಗಳ ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ತಮ್ಮ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಮತ್ತೆ ಬೇರೆ ಯಾರಾದರೂ ಸಂತ್ರಸ್ತೆಯರು ಮುಂದೆ ಬಂದರೆ ನಾವು ಅವರಿಂದ ದೂರು ಪಡೆದು ತನಿಖೆ ನಡೆಸುತ್ತೇವೆ.

-ಮಿಥುನ್‌ ಕುಮಾರ್, ಡಿಸಿಪಿ, ಈಶಾನ್ಯ ವಿಭಾಗ