ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದೇಶದಿಂದ ಆಹಾರ ಪೊಟ್ಟಣ ಹಾಗೂ ಲಗೇಜ್ ಬ್ಯಾಗ್‌ಗಳಲ್ಲಿ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕವಾಗಿ ಬಂಧಿಸಿದ್ದಾರೆ.ಕಳೆದ ಎರಡು ದಿನಗಳಿಂದ ಕಸ್ಟಮ್ಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳಿಂದ ಪ್ರತ್ಯೇಕವಾಗಿ ಒಟ್ಟು ₹3.8 ಕೋಟಿ ಮೌಲ್ಯದ 11 ಕೆಜಿ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ಹೇಳಿದೆ.
ಬ್ಯಾಕಾಂಕ್‌ನಿಂದ ಕೆಐಎಗೆ ಸೋಮವಾರ ಬಂದಳಿದ ಪೆಡ್ಲರ್‌ನ್ನು ಬಂಧಿಸಲಾಯಿತು. ಆತನ ಬಳಿ ಆಹಾರ ಪೊಟ್ಟಣಗಳಲ್ಲಿ ತುಂಬಿದ್ದ ₹63 ಲಕ್ಷ ಮೌಲ್ಯದ 1.8 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಅದೇ ರೀತಿ ಭಾನುವಾರ ಮತ್ತೊಬ್ಬನ ಲಗೇಜ್ ಬ್ಯಾಗ್‌ನಲ್ಲಿ ₹31.65 ಲಕ್ಷ ಬೆಲೆಯ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಕಾಂಕ್‌ನಿಂದ ಕೆಐಎಗೆ ಭಾನುವಾರ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಲಾಯಿತು. ಆಗ ಆತನ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ₹2.8 ಕೋಟಿ ಬೆಲೆಯ 8 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.