ಸಿಐಡಿ ಪೊಲೀಸರಿಂದ ಕೃಷಿ ಸಂಘದ ಮಾಜಿ, ಹಾಲಿ ಸಿಇಒ ಬಂಧನ

KannadaprabhaNewsNetwork | Published : Apr 23, 2025 12:37 AM

ಸಾರಾಂಶ

ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಕೋಟ್ಯಂತರ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗಿದ್ದ ಸಂಘದ ಮಾಜಿ ಮತ್ತು ಹಾಲಿ ಸಿಇಒ ಅವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಕೋಟ್ಯಂತರ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗಿದ್ದ ಸಂಘದ ಮಾಜಿ ಮತ್ತು ಹಾಲಿ ಸಿಇಒ ಅವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಂಘದ ಮಾಜಿ ಸಿಇಒ ಹಿರೇಮರಳಿ ಸಂದೇಶ್, ಈ ಹಿಂದಿನ ಕ್ಯಾಷಿಯರ್ ಹಾಗೂ ಹಾಲಿ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀರಶೆಟ್ಟಹಳ್ಳಿ ಕಿರಣ್ ಅವರು ಷೇರುದಾರರ ಫಿಗ್ಮಿ, ಠೇವಣಿ ಹಾಗೂ ರೈತರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಅಕ್ರಮವಾಗಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಟ್ಟು ನಾಲ್ಕು ಕೋಟಿಗೂ ಹಣ ದುರ್ಬಳಕೆ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಬೇವಿನಕುಪ್ಪೆ ಯೋಗೇಶ್ ಅವರು ಸೂಕ್ತ ಕ್ರಮಗೊಳ್ಳುವಂತೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪಾಂಡವಪುರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ಪೊಲೀಸರಿಗೆ ವರ್ಗಾಹಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಸಿಐಡಿ ಪೊಲೀಸರು ಕಳೆದ ವಾರದ ಹಿಂದೆಷ್ಟೇ ಕಸಬಾ ಸೊಸೈಟಿಗೆ ಧಿಡೀರ್ ದಾಳಿ ಮಾಡಿ ಸಂಘದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲಿಸಿ ಸಂಘದ ನೌಕರರು, ಪದಾಧಿಕಾರಿಗಳು ಮತ್ತು ನಿರ್ದೇಶಕರ ಹೇಳಿಕೆ ದಾಖಲಿಸಿಕೊಂಡಿದ್ದರು.

ಸಂಘದ ಹಾಲಿ ಮತ್ತು ಮಾಜಿ ಸಿಇಒಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ವಿವಾರಣೆಗೆ ತೆರಳಿದ್ದ ಮಾಜಿ ಸಿಇಒ ಸಂದೇಶ್ ಅವರನ್ನು ಕಳೆದ ನಾಲ್ಕು ದಿನಗಳ ಹಿಂದೆ ಹಾಗೂ ಹಾಲಿ ಸಿಇಒ ಕಿರಣ್ ಅವರನ್ನು ಸೋಮವಾರ ರಾತ್ರಿ ಬಂಧಿಸಿ ಇಬ್ಬರನ್ನು ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸದನದಲ್ಲಿ ವಿಚಾರ ಪ್ರಸ್ತಾಪಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಕಷ್ಟಪಟ್ಟು ದುಡಿದು ಉಳಿತಾಯ ಮಾಡಿ ಫಿಗ್ಮಿ ಕಟ್ಟಿದ್ದ ರೈತರು, ವ್ಯಾಪಾರಸ್ಥರು ಮತ್ತು ತಮ್ಮ ಮಕ್ಕಳ ಶಿಕ್ಷಣ, ಮದುವೆ ಇತ್ಯಾದಿಗಳಿಗಾಗಿ ಉಳಿತಾಯ ಮಾಡಿದ್ದ 4 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿತ್ತು. ಹಣ ದುರ್ಬಳಕೆ ಮಾಡಿಕೊಂಡವರು ಐಷಾರಾಮಿ ಜೀವನ ನಡೆಸುವ ಜತೆಗೆ ವಿವಿಧ ವ್ಯಾಪಾರಗಳಿಗೆ ಬಂಡವಾಳ ತೊಡಗಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಈ ಎಲ್ಲವೂ ತನಿಖೆಗೆ ಒಳಪಡಿಸಿ ಬಂಧಿತ ಆರೋಪಿಗಳಿಂದ ದುರ್ಬಳಕೆ ಆದ ಹಣ ಬಡ್ಡಿ ಸಮೇತ ವಸೂಲಿ ಮಾಡಿ ರೈತರು, ವ್ಯಾಪರಸ್ಥರಿಗೆ ಹಿಂದಿರುಗಿಸಬೇಕುಎಂದು ಷೇರುದಾರರು ಆಗ್ರಹಿಸಿದ್ದಾರೆ.

Share this article