ರಸ್ತೆ ಬದಿ ಕಾರೊಳಗೆ ಕಾಮದಾಟ: ಬುದ್ಧಿಹೇಳಲು ಬಂದ ಪೊಲೀಸ್‌ ಹತ್ಯೆಗೆ ಯತ್ನ

KannadaprabhaNewsNetwork | Published : Jan 25, 2024 2:01 AM

ಸಾರಾಂಶ

ರಸ್ತೆ ಬದಿ ಕಾರಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದ ಜೋಡಿಗೆ ಬುದ್ಧಿ ಹೇಳಲು ಬಂದ ರಿಸರ್ವ್‌ ಪೊಲೀಸ್‌ ಆಧಿಕಾರಿಯ ಮೇಲೆ ಕಾರು ಹತ್ತಿಸಲು ಯತ್ನಿಸಿದ ಚಾಲಕ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಡಹಗಲೇ ಸಾರ್ವಜನಿಕ ರಸ್ತೆಯ ಬದಿ ಕಾರಿನೊಳಗೆ ಬೆತ್ತಲಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕ-ಯುವತಿಗೆ ಬುದ್ಧಿ ಹೇಳಲು ಮುಂದಾದ ಪೊಲೀಸ್‌ ಅಧಿಕಾರಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜ.20ರಂದು ಮಧ್ಯಾಹ್ನ 3.30ರ ಸುಮಾರಿಗೆ ಉಪಕಾರ ಲೇಔಟ್‌ನ ಮೂರನೇ ಮುಖ್ಯರಸ್ತೆಯ ಮೂರನೇ ಅಡ್ಡರಸ್ತೆಯ ಊರ್ವ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಪಶ್ಚಿಮ ವಿಭಾಗದ ರಿಸರ್ವ್‌ ಸಬ್‌ ಇನ್‌ಸ್ಪೆಕ್ಟರ್‌(ಆರ್‌ಎಸ್ಐ) ಕೆ.ಮಹೇಶ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತ ಜೋಡಿಯ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಉಪಕಾರ ಲೇಔಟ್‌ ನಿವಾಸಿ ಆರ್‌ಎಸ್‌ಐ ಮಹೇಶ್‌ ಜ.20ರಂದು ಮಧ್ಯಾಹ್ನ 3.30ರ ಸುಮಾರಿಗೆ ಊಟ ಮುಗಿಸಿ ವಾಕಿಂಗ್‌ ಮಾಡಲು ಮನೆ ಎದುರಿನ ರಸ್ತೆಗೆ ಬಂದಿದ್ದಾರೆ. ಈ ವೇಳೆ ರಸ್ತೆಯ ಎಡಬದಿ ಬಿಳಿ ಬಣ್ಣದ ಕಾರೊಂದು ನಿಂತಿರುವುದು ಕಂಡು ಬಂದಿದೆ. ಏಳೆಂಟು ಹೆಜ್ಜೆ ಮುಂದೆ ಹೋಗಿ ಬಳಿಕ ಹಿಂದಿರುಗಿ ನೋಡಿದಾಗ ಆ ಕಾರಿನ ಹಿಂಬದಿ ಆಸನದಲ್ಲಿ ಯುವಕ-ಯುವತಿ ವಿವಸ್ತ್ರರಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ಕಾರು ಹತ್ತಿಸಲು ಯತ್ನ:

ಸಾರ್ವಜನಿಕ ರಸ್ತೆಯಲ್ಲಿ ಹಲವರು ವಾಕಿಂಗ್‌ಗೆ ಬರುವುದರಿಂದ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವ ಜೋಡಿಗೆ ತಿಳಿ ಹೇಳಲು ಮಹೇಶ್‌ ಕಾರಿನ ಮುಂಭಾಗಕ್ಕೆ ಬಂದು ನೋಂದಣಿ ಸಂಖ್ಯೆ ನೋಡಲು ಕೆಳಗೆ ಬಗ್ಗಿದ್ದಾರೆ. ಆಗ ಕಾರಿನ ಹಿಂಬದಿ ಸೀಟಿನಲ್ಲಿದ್ದ ಯುವಕ ಚಾಲಕನ ಸೀಟಿಗೆ ಬಂದು ಏಕಾಏಕಿ ಕಾರು ಸ್ಟಾರ್ಟ್‌ ಮಾಡಿ ಮುಂದಕ್ಕೆ ಚಲಾಯಿಸಿ ಮಹೇಶ್‌ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಮಹೇಶ್‌ ಎಚ್ಚೆತ್ತುಕೊಂಡು ತಕ್ಷಣ ಕಾರಿನ ಬಾನೆಟ್‌ ಮೇಲೆ ಜಿಗಿದು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.ದಿಢೀರ್‌ ಬ್ರೇಕ್‌ ಹಾಕಿ

ಕೆಳಗೆ ಬೀಳಿಸಿ ಪರಾರಿ

ಯುವಕ ರಿವರ್ಸ್‌ ಗೇರ್‌ಗೆ ಹಾಕಿ ಕಾರನ್ನು ವೇಗವಾಗಿ ಹಿಮ್ಮುಖವಾಗಿ ಚಲಾಯಿಸಲು ಮುಂದಾಗಿದ್ದಾನೆ. ಮಹೇಶ್‌ ಅವರು ಕಾರು ನಿಲ್ಲಿಸುವಂತೆ ಕೂಗಿ ಕೊಂಡರೂ ಆತ ಕಾರು ನಿಲ್ಲಿಸಿಲ್ಲ. ಸ್ವಲ್ಪ ದೂರ ಚಲಿಸಿದ ಬಳಿಕ ಏಕಾಏಕಿ ಕಾರಿನ ಬ್ರೇಕ್‌ ಹಾಕಿದ್ದಾನೆ. ಈ ವೇಳೆ ಮಹೇಶ್‌ ಎಗರಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಮೈ-ಕೈಗೆ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಆದರೂ ಆ ಯುವಕ ಕಾರು ನಿಲ್ಲಸದೆ ಪರಾರಿಯಾಗಿದ್ದಾನೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್‌ ಅವರನ್ನು ನೋಡಿದ ಸಾರ್ವಜನಿಕರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ಮಹೇಶ್ ಚೇತರಿಸಿಕೊಂಡಿದ್ದಾರೆ. ಬಳಿಕ ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರು ಹಾಗೂ ಅದರ ಚಾಲಕನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article