ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕಾರು, ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಕೋಣನಕುಂಟೆ ಠಾಣೆ ಪೊಲೀಸರು ಹಾಸನ ಜಿಲ್ಲೆ ಸಕಲೇಶಪುರ ಮೂಲದ ಸೋಮಶೇಖರ್ (34) ಮತ್ತು ಒಡಿಶಾ ಮೂಲದ ಸುನಧರ್ ದಿಗಲ್ (28) ಎಂಬುವವರನ್ನು ಬಂಧಿಸಿದ್ದು, ಆರೋಪಿಗಳಿಂದ ₹46.10 ಲಕ್ಷ ಮೌಲ್ಯದ 1.1 ಕೆ.ಜಿ. ಗಾಂಜಾ, 3.44 ಕೆ.ಜಿ. ಹಶಿಷ್ ಆಯಿಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿದ್ದಾರೆ. ಮಾ.12ರಂದು ದೊಡ್ಡಕಲ್ಲಸಂದ್ರದ ನಾರಾಯಣನಗರ ಜೋಡಿ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಕಾರಿನೊಳಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಇಬ್ಬರನ್ನು ಬಂಧಿಸಲಾಗಿದೆ.
ವೃತ್ತಿಯಲ್ಲಿ ಲಾರಿ ಚಾಲಕ:ಆರೋಪಿ ಸೋಮಶೇಖರ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ. ಮತ್ತೊಬ್ಬ ಆರೋಪಿ ಒಡಿಶಾ ಮೂಲದ ಸುನಧರ್ ಸಹಾಯದಿಂದ ಒಡಿಶಾದಲ್ಲಿ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ನಗರಕ್ಕೆ ತಂದು ಪರಿಚಿತ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಆರೋಪಿ ಸುಗಧರ್ ಒಡಿಶಾದಿಂದ ರೈಲಿನಲ್ಲಿ ಈ ಮಾದಕವಸ್ತುವನ್ನು ನಗರಕ್ಕೆ ಸಾಗಿಸಿ, ಆರೋಪಿ ಸೋಮಶೇಖರ್‌ಗೆ ತಲುಪಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿ ಸೋಮಶೇಖರ್ ಈ ಹಿಂದೆ ಸಹ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಹೊಸಕೋಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಮಾದಕವಸ್ತು ಸೇವನೆ ಆರೋಪದಡಿ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಬಿಡುಗಡೆಯಾದ ಬಳಿಕವೂ ಆರೋಪಿ ಸೋಮಶೇಖರ್ ಡ್ರಗ್ಸ್ ಪೆಡ್ಲಿಂಗ್ ದಂಧೆ ಮುಂದುವರೆಸಿದ್ದ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಡಿಶಾ, ಆಂಧ್ರದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹1.80 ಲಕ್ಷ ಮೌಲ್ಯದ 12.9 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂ1 ಕಾರು ಜಪ್ತಿ ಮಾಡಿದ್ದಾರೆ.
ಅಸ್ಸಾಂ ಮೂಲದ ಶಹಾರು ಇಸ್ಲಾಂ ಚೌಧರಿ (25) ಮತ್ತು ದಿಲ್ಬರ್ ಹುಸೇನ್ ಮಜುಂದರ್ (26) ಬಂಧಿತರು. ಇತ್ತೀಚೆಗೆ ನಲ್ಲೂರಹಳ್ಳಿ ಕೆರೆ ಸಮೀಪದ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಕಾರಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಇಬ್ಬರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರಕ್ಕೆ ತಂದು ಪರಿಚಿತ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.