ಪೊಲೀಸ್‌ ಕಾರಲ್ಲೇ ರನ್ಯಾ ಸ್ಮಗ್ಲಿಂಗ್‌?

KannadaprabhaNewsNetwork | Published : Mar 15, 2025 11:46 PM

ಸಾರಾಂಶ

ತಮ್ಮ ಮಲ ತಂದೆಯೂ ಆಗಿರುವ ಡಿಜಿಪಿ ಅವರ ಹೆಸರು ಬಳಸಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್‌) ಉಪಯೋಗಿಸಿಕೊಂಡಿರುವುದು ಮಾತ್ರವಲ್ಲ, ಚಿನ್ನ ಕಳ್ಳ ಸಾಗಾಣಿಕೆಗೆ ಸರ್ಕಾರಿ ಕಾರನ್ನು ಕೂಡ ನಟಿ ರನ್ಯಾರಾವ್ ಬಳಸಿರಬಹುದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳ ತನಿಖೆಯಲ್ಲಿ ಅನುಮಾನ ವ್ಯಕ್ತವಾಗಿದೆ.

- ತಂದೆಯ ಕಾರಿನಲ್ಲೇ ಹಲವು ಬಾರಿ ಪಿಕಪ್‌-ಡ್ರಾಪ್‌ ಪಡೆದಿದ್ದ ಗೋಲ್ಡ್‌ ಲೇಡಿ

- ಟ್ರಾವೆಲ್‌ ಹಿಸ್ಟರಿ ಜಾಲಾಡುತ್ತಿರುವ ಡಿಆರ್‌ಐ । ರನ್ಯಾ ತಂದೆ ಚಾಲಕಗೆ ಬಿಸಿ?

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಮಲ ತಂದೆಯೂ ಆಗಿರುವ ಡಿಜಿಪಿ ಅವರ ಹೆಸರು ಬಳಸಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್‌) ಉಪಯೋಗಿಸಿಕೊಂಡಿರುವುದು ಮಾತ್ರವಲ್ಲ, ಚಿನ್ನ ಕಳ್ಳ ಸಾಗಾಣಿಕೆಗೆ ಸರ್ಕಾರಿ ಕಾರನ್ನು ಕೂಡ ನಟಿ ರನ್ಯಾರಾವ್ ಬಳಸಿರಬಹುದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳ ತನಿಖೆಯಲ್ಲಿ ಅನುಮಾನ ವ್ಯಕ್ತವಾಗಿದೆ.

ದುಬೈನಿಂದ ಮಾ.3 ರಂದು ಸಂಜೆ ಆಗಮಿಸಲಿದ್ದ ನಟಿ ರನ್ಯಾರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಖಾಸಗಿ ವಾಹನ ಬಂದಿತ್ತು. ಆದರೆ ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ರನ್ಯಾ ಅವರನ್ನು ಅವರ ಮಲ ತಂದೆ, ರಾಜ್ಯ ಪೊಲೀಸ್‌ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್‌ ಅವರ ಸರ್ಕಾರಿ ಕಾರಿನಲ್ಲಿ ಪಿಕ್‌ ಅಂಡ್ ಡ್ರಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ತಮ್ಮ ತಂದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ವಾಹನದಲ್ಲೇ ಅವರು ಚಿನ್ನ ಸಾಗಿಸಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರನ್ಯಾ ಅವರ ಟ್ರಾವೆಲ್ಸ್ ಹಿಸ್ಟರಿ ಪಡೆದು ಡಿಆರ್‌ಐ ಪರಿಶೀಲಿಸಿದೆ. ಈ ಬೆಳವಣಿಗೆಯಿಂದ ಡಿಜಿಪಿಯ ಸರ್ಕಾರಿ ಕಾರು ಚಾಲಕರಿಗೆ ಡಿಆರ್‌ಐ ತನಿಖೆ ಎದುರಾಗಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ರನ್ಯಾ ಪಿಕಪ್‌ಗೆ ಬಂದ ಕಾರು ಯಾವುದು?:

ತನಗೆ ದುಬೈನಲ್ಲಿ ಚಿನ್ನ ಕೊಟ್ಟು ಅದನ್ನು ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯ ಟ್ರಾಫಿಕ್ ಸಿಗ್ನಲ್‌ ಸಮೀಪ ಆಟೋದಲ್ಲಿಡುವಂತೆ ಅಪರಿಚಿತರು ಹೇಳಿದ್ದರು ಎಂದು ಡಿಆರ್‌ಐ ವಿಚಾರಣೆ ವೇಳೆ ರನ್ಯಾ ಹೇಳಿದ್ದರು. ಹೀಗಾಗಿ ವಿಮಾನ ನಿಲ್ದಾಣದಿಂದ ಅವರನ್ನು ಪಿಕಪ್ ಮಾಡಲು ಬಂದವರ ಬಗ್ಗೆ ಮಾಹಿತಿ ಬಹುಮುಖ್ಯವಾಗಿದೆ. ಮಾ.3 ರಂದು ರಾತ್ರಿ 7 ಗಂಟೆಗೆ ದುಬೈನಿಂದ ವಿಮಾನದಲ್ಲಿ ಆಗಮಿಸಲಿದ್ದ ರನ್ಯಾ ಅವರನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಖಾಸಗಿ ಕಾರು ತೆರಳಿತ್ತು. ಆದರೆ ಅವರ ಬಂಧನ ಬಳಿಕ ಸಂಪರ್ಕಕ್ಕೆ ಸಿಗದ ಕಾರು ಚಾಲಕನಿಗೆ ಡಿಆರ್‌ಐ ತಲಾಶ್ ನಡೆಸಿದೆ ಎನ್ನಲಾಗಿದೆ.

ದುಬೈನಿಂದ ಹೊರಡುವ ಮುನ್ನ ಅಥವಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ರನ್ಯಾ ಅವರೇ ಖಾಸಗಿ ಕಾರನ್ನು ಸಾರಿಗೆಗೆ ಬುಕ್ ಮಾಡಿದ್ದಾರೆಯೇ ಅಥವಾ ರನ್ಯಾ ಅವರನ್ನು ಕರೆದುಕೊಂಡು ಬರಲು ಅವರ ಮಲತಂದೆ ರಾಮಚಂದ್ರರಾವ್‌ ಅವರೇ ಕಾರು ಕಳುಹಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಅಲ್ಲದೆ ರನ್ಯಾ ಅವರನ್ನು ವಿಮಾನ ನಿಲ್ದಾಣದಿಂದ ಪಿಕಪ್ ಮಾಡಲು ಸ್ಮಗ್ಲರ್ಸ್‌ಗಳೂ ಕಾರು ಕಳುಹಿಸಿರುವ ಕುರಿತು ಸಹ ಅನುಮಾನವಿದೆ. ಹೀಗಾಗಿ ಅಂದು ಅವರನ್ನು ಕರೆದೊಯ್ಯಲು ಬಂದ ಕಾರು ಚಾಲಕನ ವಿಚಾರಣೆ ಮಹತ್ವದ್ದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಐಜಿ ಮೇಲ್ಮಟ್ಟದ ಅಧಿಕಾರಿಗಳಿಗೆ ಎರಡು ಕಾರು ಹಾಗೂ ಒಂದು ಬೈಕ್ ಅನ್ನು ಸರ್ಕಾರ ನೀಡುತ್ತದೆ. ಊಟ ತರಲು, ಟಪಾಲ್ ಹಾಗೂ ಬ್ಯಾಂಕ್ ಹೀಗೆ ಇತರೆ ಕೆಲಸಗಳಿಗೆ ಬೈಕ್‌ ಬಳಕೆಯಾಗುತ್ತದೆ. ಒಂದು ಕಾರನ್ನು ಅಧಿಕಾರಿ ಬಳಸಿದರೆ ಮತ್ತೊಂದು ಅವರ ಮನೆ ಅಥವಾ ಕಚೇರಿ ಆವರಣದ ನಿಲ್ಲುತ್ತದೆ. ಈ ಹೆಚ್ಚುವರಿ ಕಾರು ಅಧಿಕಾರಿಯವರ ಕುಟುಂಬದವರಿಗೆ ಬಳಕೆಯಾಗುತ್ತದೆ ಎಂದು ಮೂಲಗಳು ಹೇಳಿವೆ.

ಬ್ಯಾಗ್‌ನಲ್ಲಿ ತಂದೆ ಪರಿಶೀಲನೆ ಇಲ್ಲ:

ತಮ್ಮ ಸಾಹೇಬ್ರ (ಅಧಿಕಾರಿಗಳ) ಭಯಕ್ಕೆ ಕಾರಿನಲ್ಲಿ ಅವರ ಮಕ್ಕಳು ತರುವ ಬ್ಯಾಗ್‌ ಅಥವಾ ಸೂಟ್‌ಕೇಸ್‌ಗಳನ್ನು ಚಾಲಕರು ಪರಿಶೀಲಿಸುವುದಿಲ್ಲ. ಹೀಗಾಗಿ ವಿಮಾನ ನಿಲ್ದಾಣಕ್ಕೆ ರನ್ಯಾರವರನ್ನು ಪಿಕಪ್ ಅಂಡ್ ಡ್ರಾಪ್ ಮಾಡಲು ತೆರಳಿದ್ದ ಚಾಲಕರಿಗೂ ಸಹ ಚಿನ್ನ ಸಾಗಾಣೆ ಬಗ್ಗೆ ಮಾಹಿತಿ ಇರುವುದು ಅನುಮಾನ ಎನ್ನಲಾಗಿದೆ.

---

ಸುಳ್ಳು ಕೇಸು ಹಾಕಿ, ಸಿಲುಕಿಸುವ ಯತ್ನಕಾರಾಗೃಹ ಅಧಿಕಾರಿಗಳಿಗೆ ನಟಿ ಪತ್ರ?==ಕನ್ನಡಪ್ರಭ ವಾರ್ತೆ ಬೆಂಗಳೂರು‘ನಾನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಪಾಲ್ಗೊಂಡಿಲ್ಲ. ಯಾರನ್ನೋ ರಕ್ಷಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಕಾರಾಗೃಹದ ಅಧಿಕಾರಿಗಳಿಗೆ ನಟಿ ರನ್ಯಾ ರಾವ್‌ ಪತ್ರ ಬರೆದಿದ್ದಾರೆ ಎನ್ನಲಾಗಿದೆ.ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರನ್ಯಾ ರಾವ್ ಇದ್ದಾರೆ. ಮೊದಲು ಡಿಆರ್‌ಐ ವಿಚಾರಣೆ ವೇಳೆ ಅಪರಿಚಿತರ ಸೂಚನೆ ಮೇರೆಗೆ ದುಬೈನಿಂದ ಚಿನ್ನ ತಂದಿದ್ದಾಗಿ ಹೇಳಿದ್ದ ಅವರು, ಈಗ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಉಲ್ಟಾ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ರನ್ಯಾರಾವ್‌ ಅವರ ಪತ್ರವನ್ನು ಡಿಆರ್‌ಐಗೆ ಕಾರಾಗೃಹ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ. ಆದರೆ ಈ ಪತ್ರದ ಕುರಿತು ಕಾರಾಗೃಹ ಇಲಾಖೆ ಅಧಿಕಾರಿಗಳು ಖಚಿತಪಡಿಸಿಲ್ಲ.ನಾನು ದುಬೈಗೆ ರಿಯಲ್ ಎಸ್ಟೇಟ್ ಸಂಬಂಧ ಹೋಗಿದ್ದೆ. ಅಲ್ಲಿಂದ ಮಾ.3 ರಂದು ಮರಳುವಾಗ ನಾನು ಚಿನ್ನ ತಂದಿರಲಿಲ್ಲ. ಆದರೆ ಯಾರನ್ನೋ ರಕ್ಷಿಸುವ ಸಲುವಾಗಿ ನನ್ನನ್ನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಸಂಚು ರೂಪಿಸಿ ಕೆಲವರು ಸಿಲುಕಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕಾರಾಗೃಹ ಅಧಿಕಾರಿಗಳಿಗೆ ರನ್ಯಾ ಕೋರಿದ್ದಾಳೆ ಎನ್ನಲಾಗಿದೆ.

Share this article