ಲಖನೌ: ಐಸಿಸ್‌ನ ಅಲಿಗಢ ಜಾಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಅಲಿಗಢ ಮುಸ್ಲಿಂ ವಿವಿಯ ನಾಲ್ವರು ವ್ಯಕ್ತಿಗಳನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಬಂಧಿಸಿದೆ. ಇವರೆಲ್ಲರೂ ಅಲಿಗಢ ವಿವಿಯಲ್ಲಿ ವಿವಿಧ ಪದವಿ ಪಡೆದಿದ್ದರು. ಇವರಿಂದ ನಿಷೇಧಿಸಲ್ಪಟ್ಟಿರುವ ಐಸಿಸ್ ಸಾಹಿತ್ಯ, ಮೊಬೈಲ್ ಫೋನ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಾಲ್ವರು ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದು, ಜಿಹಾದ್ ಮೂಲಕ ಚುನಾಯಿತ ಸರ್ಕಾರವನ್ನು ಬೀಳಿಸಲು ಯೋಜನೆ ರೂಪಿಸಿದ್ದರು. ಅಲ್ಲದೇ ಉಗ್ರ ಸಂಘಟನೆಯ ಬಗ್ಗೆ ಆಸಕ್ತಿಯುಳ್ಳ ವ್ಯಕ್ತಿಗಳನ್ನು ಸೆಳೆದು ಸಂಘಟನೆಗೆ ಸೇರ್ಪಡೆ ಮಾಡುತ್ತಿದ್ದರು. ಉಗ್ರ ಜಿಹಾದ್‌ಗಾಗಿ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.ಕಾಫಿರರ ಮೇಲೆ ಸೇಡಿಗೆ ಸಂಚು: ಚಾರ್ಜ್‌ಶೀಟ್
ಮುಂಬೈ: ಇತ್ತೀಚೆಗೆ ಪುಣೆಯಲ್ಲಿ ಬಂಧಿತರಾದ 7 ಶಂಕಿತ ಐಸಿಸ್ ಉಗ್ರರು ಐಸಿಸ್‌ನ ಉಗ್ರವಾದಿತನವನ್ನು ಭಾರತದಲ್ಲಿ ಜಾರಿಗೆ ತರುವ ಉದ್ದೇಶದಿಂದ ತಮ್ಮ ಸಂಚಿನ ಎಲ್ಲ ವಿವರಗಳನ್ನು ‘ಕಾಫಿರ್ (ಮುಸ್ಲಿಮೇತರರು) ಮೇಲೆ ಪ್ರತೀಕಾರ’ ಎಂಬ ಪುಸ್ತಕದಲ್ಲಿ ಶೇಖರಿಸಿಟ್ಟಿದ್ದರು. ಮುಸ್ಲಿಮೇತರರು ಮುಸ್ಲಿಮರ ಮೇಲೆ ನಡೆಸುವ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರು ಎಂದು ಎನ್ಐಎ ಹೇಳಿದೆ.