ಬೆಂಗಳೂರು : ನಿವೇಶನ ಮಾರಾಟ ಮಾಡುವುದಾಗಿ ಉದ್ಯಮಿಯೊಬ್ಬರಿಂದ ವಿವಿಧ ಹಂತಗಳಲ್ಲಿ ₹56 ಲಕ್ಷ ಮುಂಗಡ ಹಣ ಪಡೆದು ಬಳಿಕ ನಿವೇಶನ ನೋಂದಣಿ ಮಾಡಿಕೊಡದೆ ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾದಹಳ್ಳಿ ವಿಲೇಜ್ ಹಾಲಿವುಡ್ ಟೌನ್ ನಿವಾಸಿ ಜಾನ್ ರಾಬರ್ಟ್ ಕೊಲಾಕೋ ವಂಚನೆಗೆ ಒಳಗಾದ ಉದ್ಯಮಿ. ಇವರು ನೀಡಿದ ದೂರಿನ ಮೇರೆಗೆ ಎ.ಶಿವಲಿಂಗಯ್ಯ ಮತ್ತು ಆತನ ಪತ್ನಿ ಭವಾನಿ ರೆಡ್ಡಿ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಆರೋಪಿಗಳಾದ ಶಿವಲಿಂಗಯ್ಯ ಮತ್ತು ಅವರ ಪತ್ನಿ ಭವಾನಿ ರೆಡ್ಡಿ ದೇವನಹಳ್ಳಿ ತಾಲೂಕು ಸಾದಹಳ್ಳಿ ವಿಲೇಜ್ ಸರ್ವೆ ಸಂಖ್ಯೆ 227 ಮತ್ತು 228ರಲ್ಲಿನ ಸ್ವಿಸ್ ಟೌನ್‌ನಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ 2016ರಲ್ಲಿ ಶಿವಲಿಂಗಯ್ಯ ಅವರು ಉದ್ಯಮಿ ಜಾನ್ ರಾಬರ್ಟ್ ಅವರನ್ನು ಸಂಪರ್ಕಿಸಿ, ನಿವೇಶನ ಮಾರುವುದಾಗಿ ತಿಳಿಸಿದ್ದಾರೆ.
ಅದರಂತೆ ಪ್ರತಿ ಚದರ ಅಡಿಗೆ ಮೂರು ಸಾವಿರ ರು.ನಂತೆ ಒಟ್ಟು ₹1.80 ಕೋಟಿಗೆ ನಿವೇಶನ ಮಾರಾಟಕ್ಕೆ ಮಾತುಕತೆ ನಡೆಸಿದ್ದಾರೆ. ಜಾನ್ ರಾಬರ್ಟ್ ಅವರು ತಮ್ಮ ಸ್ನೇಹಿತ ಆರ್.ಎನ್.ವಾಸುದೇವ್ ಜತೆಗೆ ಈ ನಿವೇಶನ ಖರೀದಿಸಲು ತೀರ್ಮಾನಿಸಿದ್ದಾರೆ. ಬಳಿಕ ಮಾತುಕತೆಯಂತೆ ನಿವೇಶನದ ಮಾಲೀಕ ಶಿವಲಿಂಗಯ್ಯಗೆ ಮುಂಗಡವಾಗಿ ₹30 ಲಕ್ಷ ನೀಡಿದ್ದಾರೆ.
ಈ ನಡುವೆ ಶಿವಲಿಂಗಯ್ಯ ತಮ್ಮ ಮಗಳ ಮದುವೆ ಎಂದು ಮತ್ತೆ ಮುಂಗಡವಾಗಿ ₹10 ಲಕ್ಷ ಪಡೆದುಕೊಂಡಿದ್ದಾರೆ. ನಂತರ ಶಿವಲಿಂಗಯ್ಯ ದಂಪತಿ 2016ರಿಂದ 2019ರ ವರೆಗೆ ವಿವಿಧ ಕಾರಣ ನೀಡಿ ನಿವೇಶನ ನೋಂದಣಿ ಮುಂದೂಡಿದ್ದಾರೆ. ಬಳಿಕ ಶಿವಲಿಂಗಯ್ಯ ಹಿಂದಿನ ದರಕ್ಕೆ ನಿವೇಶನ ಮಾರಾಟ ಸಾಧ್ಯವಿಲ್ಲ. ಈಗ ಪ್ರತಿ ಚದರ ಅಡಿಗೆ ₹3,625 ದಂತೆ ಒಟ್ಟು ₹2.17 ಕೋಟಿ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಜಾನ್ ರಾಬರ್ಟ್ ಒಪ್ಪಿದ್ದಾರೆ. ಬಳಿಕ ಶಿವಲಿಂಗಯ್ಯ ಮುಂಗಡವಾಗಿ ಮತ್ತೆ ₹16 ಲಕ್ಷ ಪಡೆದುಕೊಂಡಿದ್ದಾರೆ. 2019ರ ಜು.24ರಂದು ನಿವೇಶನ ನೋಂದಣಿ ಮಾಡಿಕೊಡುವುದಾಗಿ ಹೇಳಿದ್ದ ಶಿವಲಿಂಗಯ್ಯ ಅಂದು ಮಾತಿಗೆ ತಪ್ಪಿದ್ದಾರೆ.
ನಿವೇಶನ ಕೊಡದೆ ಮನೆ ಖಾಲಿ ಮಾಡಿದ ದಂಪತಿ
ಕೋವಿಡ್ ಎದುರಾದ ಹಿನ್ನೆಲೆಯಲ್ಲಿ 2020ರಿಂದ 2022ರ ವರೆಗೆ ಜಾನ್ ರಾಬರ್ಟ್ ಅವರು ಶಿವಲಿಂಗಯ್ಯ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. 2022ರ ಜನವರಿಯಲ್ಲಿ ಶಿವಲಿಂಗಯ್ಯ ಅವರ ಸದಾಶಿವನಗರ ನಿವಾಸಕ್ಕೆ ಜಾನ್ ರಾಬರ್ಟ್ ಭೇಟಿ ನೀಡಿದಾಗ, ಶಿವಲಿಂಗಯ್ಯ ದಂಪತಿ ಮನೆ ಖಾಲಿ ಮಾಡಿರುವ ವಿಚಾರ ಗೊತ್ತಾಗಿದೆ. ಮೊಬೈಲ್ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾರೆ ಎಂದು ಜಾನ್ ರಾಬರ್ಟ್ ದೂರಿನಲ್ಲಿ ಆರೋಪಿಸಿದ್ದಾರೆ.