ಹೂಡಿಕೆ ನೆಪದಲ್ಲಿ ₹3 ಕೋಟಿಗೂ ಅಧಿಕ ಹಣ ಪಡೆದು ವಂಚನೆ

KannadaprabhaNewsNetwork |  
Published : Apr 25, 2025, 01:49 AM ISTUpdated : Apr 25, 2025, 04:23 AM IST
Money Horoscope

ಸಾರಾಂಶ

ಹೂಡಿಕೆ ನೆಪದಲ್ಲಿ ಮಾಸಿಕ ಶೇ.10ರ ಲಾಭಾಂಶದ ಆಮಿಷವೊಡ್ಡಿ ಸುಮಾರು 3 ಕೋಟಿ ರು.ಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಹೂಡಿಕೆ ನೆಪದಲ್ಲಿ ಮಾಸಿಕ ಶೇ.10ರ ಲಾಭಾಂಶದ ಆಮಿಷವೊಡ್ಡಿ ಸುಮಾರು 3 ಕೋಟಿ ರು.ಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲಹಂಕ ಉಪನಗರ ಚಿಕ್ಕಬೊಮ್ಮಸಂದ್ರದ ಆರ್‌.ಎಸ್‌.ರಘು ಕುಮಾರ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅನೂರ್‌ ಶಂಶೀರ್‌, ಲಕ್ಷ್ಮಣ್‌ ಕುಮಾರ್ ಬೆಹರಾ, ನರಸಿಂಹರಾಜು ಕುಮಾರ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ರಘುಕುಮಾರ್‌ ಅವರಿಗೆ ಆರೋಪಿ ನರಸಿಂಹರಾಜು ಕುಮಾರ್‌ ಬಹಳ ವರ್ಷಗಳಿಂದ ಪರಿಚಯವಿದ್ದರು. ಇವರ ಮುಖಾಂತರ 2023ರ ಏಪ್ರಿಲ್‌ನಲ್ಲಿ ಅನೂರ್‌ ಶಂಶೀರ್ ಮತ್ತು ಲಕ್ಷ್ಮಣ್‌ ಕುಮಾರ್‌ ಬೆಹೆರಾ ಪರಿಚಯವಾಗಿದೆ. ಬಳಿಕ ಈ ಇಬ್ಬರು ‘ಸಿಎಫ್‌ಎಸ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ಬಗ್ಗೆ ತಿಳಿಸಿದ್ದಾರೆ. ಈ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಮಾಸಿಕ ಶೇ.10ರಷ್ಟು ಲಾಂಭಾಂಶ ಕೊಡುವುದಾಗಿ ಆಮಿಷವೊಡ್ಡಿದ್ದಾರೆ.

ಭದ್ರತೆ ಭರವಸೆ:

ಬಳಿಕ ಜ್ಞಾನಭಾರತಿ 2ನೇ ಹಂತದ ಮಲ್ಲತಹಳ್ಳಿಯ ಕಚೇರಿಗೆ ರಘುಕುಮಾರ್‌ ಅವರನ್ನು ಕರೆಸಿಕೊಂಡು ಕಂಪನಿಯ ವೆಬ್‌ಸೈಟ್‌ ತೋರಿಸಿ ಹೂಡಿಕೆ ಮಾಡುವಂತೆ ಕೇಳಿದ್ದಾರೆ. ಈ ವೇಳೆ ರಘುಕುಮಾರ್‌ ಜತೆಗಿದ್ದ ಸ್ನೇಹಿತರಾದ ರಾಮಕೃಷ್ಣ, ಶಿವಕುಮಾರ್‌, ಯೋಗೇಶ್‌, ಮಹದೇವ್‌ ಮತ್ತು ಗೌರೀಶ್‌ಗೂ ಕೂಡ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಭದ್ರತೆಗಾಗಿ ಒಪ್ಪಂದದ ಪತ್ರ ಹಾಗೂ ಭರ್ತಿ ಮಾಡಿದ ಚೆಕ್‌ಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇದನ್ನು ನಂಬಿದ ರಘು ಕುಮಾರ್‌ ಹಾಗೂ ಸ್ನೇಹಿತರು 2023ರ ಮೇನಿಂದ ಆ ಕಂಪನಿಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದಾರೆ. ಆರೋಪಿಗಳು ಆರಂಭದಲ್ಲಿ ಹೇಳಿದಂತೆ ಮಾಸಿಕ ಶೇ.10ರಷ್ಟು ಲಾಭಾಂಶ ನೀಡಿ ನಂಬಿಕೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಬಳಿಕ ಮತ್ತಷ್ಟು ಜನರಿಂದ ಹೂಡಿಕೆ ಮಾಡಿಸುವಂತೆ ಹೇಳಿದ್ದಾರೆ.

₹3 ಕೋಟಿಗೂ ಅಧಿಕ ಹೂಡಿಕೆ:

ಅದರಂತೆ ರಘು ಕುಮಾರ್‌ ಹಾಗೂ ಸ್ನೇಹಿತರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಆ ಕಂಪನಿಯಲ್ಲಿ ಹೂಡಿಕೆ ಮಾಡಿಸಿದ್ದಾರೆ. ಹೂಡಿಕೆ ಮಾಡಿದ್ದಕ್ಕೆ ಭದ್ರತೆಗಾಗಿ ಒಪ್ಪಂದದ ಪತ್ರ ಹಾಗೂ ಚೆಕ್‌ಗಳನ್ನು ಪಡೆದುಕೊಂಡಿದ್ದಾರೆ. 2024ರ ಜನವರಿ ವರೆಗೂ ವ್ಯವಹಾರ ಚೆನ್ನಾಗಿ ನಡೆದಿದೆ. ನಂತರ ದಿನಗಳಲ್ಲಿ ಹೂಡಿಕೆದಾರರಿಗೆ ಯಾವುದೇ ಲಾಂಭಾಂಶ ನೀಡಿಲ್ಲ. ಅಲ್ಲಿಯವರೆಗೆ ಹೂಡಿಕೆ ನೆಪದಲ್ಲಿ ರಘು ಕುಮಾರ್‌ ಹಾಗೂ ಅವರ ಸ್ನೆಹಿತರು ಸುಮಾರು ₹3 ಕೋಟಿಗೂ ಅಧಿಕ ಹಣವನ್ನು ಕಂಪನಿಗೆ ಹೂಡಿಕೆ ಮಾಡಿದ್ದಾರೆ.

ಹಣ ವಾಪಸ್‌ ನೀಡದೆ ವಂಚನೆ:

ಲಾಭಾಂಶ ನೀಡುವುದನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿದಾಗ ಆರೋಪಿಗಳು ಮಾರ್ಕೆಟ್‌ನಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದು ಸರಿಪಡಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಹಲವು ದಿನ ಕಳೆದರೂ ಹೂಡಿಕೆ ಹಣ ಅಥವಾ ಲಾಭಾಂಶ ಯಾವುದನ್ನೂ ನೀಡಿಲ್ಲ. ಪದೇ ಪದೇ ಹೂಡಿಕೆ ಹಣ ವಾಪಸ್ ನೀಡುವಂತೆ ಕೇಳಿದಾಗ ಆರೋಪಿಗಳು ಕಂಪನಿಯ ವೆಬ್‌ಸೈಟ್‌ ಬಂದ್‌ ಮಾಡಿ ಮಾಡಿದ್ದಾರೆ. ಹೀಗೆ ತಮಗೆ ವಂಚನೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಘು ಕುಮಾರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌