ಆರ್‌.ಆರ್‌.ನಗರದಲ್ಲೂ ಅಸ್ತಿತ್ವದಲ್ಲಿ ಇಲ್ಲದ ಸೊಸೈಟಿಗಳಿಗೆ ಹಣ ವರ್ಗ!

KannadaprabhaNewsNetwork | Updated : Jul 12 2024, 05:11 AM IST

ಸಾರಾಂಶ

ಬಿಬಿಎಂಪಿಯಲ್ಲಿ ಅಕ್ರಮವಾಗಿ ಅಸ್ತಿತ್ವದಲ್ಲಿ ಇಲ್ಲದ ಸೊಸೈಟಿಗಳಿಗೆ ಹಣ ವರ್ಗ ಮತ್ತೊಂದು ಪ್ರಕರಣ ಪತ್ತೆ ಆಗಿದೆ. ಆರ್‌.ಆರ್‌.ನಗರ ವಲಯದಲ್ಲೂ ಹಣ ವರ್ಗಾವಣೆ ಪತ್ತೆ ಆಗಿದೆ.

 ಬೆಂಗಳೂರು :  ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಸೊಸೈಟಿಗಳಿಗೆ ಅಕ್ರಮವಾಗಿ ಕೋಟ್ಯಂತರ ಹಣ ವರ್ಗಾವಣೆ ಆಗಿರುವ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ವಲಯಗಳಲ್ಲಿ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದ್ದು, ರಾಜರಾಜೇಶ್ವರಿನಗರ ವಲಯದಲ್ಲೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಆಯುಕ್ತರು ವರದಿ ಸಲ್ಲಿಸಿದ್ದಾರೆ.

₹3.31 ಕೋಟಿ ಸೊಸೈಟಿಗೆ ಬಿಡುಗಡೆ:

ಪಶ್ಚಿಮ ವಲಯದಲ್ಲಿ 2017-18 ರಿಂದ 2020-21ರ ಅವಧಿಯಲ್ಲಿ ಸಣ್ಣ ಉದ್ದಿಮೆದಾರರಿಗೆ ಸ್ವಯಂ ಉದ್ಯೋಗದ ವಿವಿಧ ಯೋಜನೆಯಲ್ಲಿ ಫಲಾನುಭವಿಗಳಿಗೆ ಧನಸಹಾಯ ನೀಡಲು ₹18 ಕೋಟಿ ಬಿಡುಗಡೆಯಾದೆ. ಅದೇ ರೀತಿ ಆರ್‌ಆರ್‌ನಗರ ವಲಯದಲ್ಲಿ ₹3.31 ಕೋಟಿ ಬಿಡುಗಡೆಯಾಗಿದೆ. ಉಳಿದ ಯಾವುದೇ ವಲಯದಲ್ಲಿ ಸಹಾಯಧನ ಹೆಸರಿನಲ್ಲಿ ಹಣ ಬಿಡುಗಡೆಯಾಗಿಲ್ಲ ಎಂದು ಪರಿಶೀಲನೆ ನಡೆಸಿರುವ ಜಂಟಿ ಆಯುಕ್ತರು ವರದಿ ನೀಡಿದ್ದಾರೆ.

ಪಶ್ಚಿಮ ವಲಯದಲ್ಲಿ ಸಣ್ಣ ಉದ್ದಿಮೆದಾರರಿಗೆ ಸ್ವಯಂ ಉದ್ಯೋಗದ ವಿವಿಧ ಯೋಜನೆಯಲ್ಲಿ ಫಲಾನುಭವಿಗಳಿಗೆ ಅರಿವಿಲ್ಲದೆ ಅಸ್ತಿತ್ವದಲ್ಲಿಯೇ ಇಲ್ಲದ ಸಹಕಾರಿ ಸಂಘ, ಸೊಸೈಟಿಗಳ ಮೂಲಕ ಕೋಟ್ಯಂತರ ರು. ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೂರ್ವಾನುಮತಿ ನೀಡುವಂತೆ ಲೋಕಾಯುಕ್ತ ಪತ್ರ ಬರೆದಿತ್ತು. ಅದರಂತೆ 2017-18 ರಿಂದ 2020-21ರ ಅವಧಿಯಲ್ಲಿ ಸಹಾಯಧನ ಪಡೆದಿರುವ ಫಲಾನುಭವಿಗಳ ಮಾಹಿತಿ ಪಡೆದು ವರದಿ ನೀಡುವಂತೆ ಈ ಹಿಂದೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಸೂಚಿಸಲಾಗಿತ್ತು.

ಆದರೆ ಬಿಬಿಎಂಪಿಯ ಉಳಿದ ವಲಯದಲ್ಲಿಯೂ ಅಕ್ರಮದ ಶಂಕೆ ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲ ಜಂಟಿ ಆಯುಕ್ತರಿಗೆ ಸೊಸೈಟಿಗಳಿಗೆ ಹಣ ವರ್ಗಾವಣೆ ಆಗಿರುವ ಮತ್ತು ಫಲಾನುಭವಿ ಪಟ್ಟಿ ಒಳಗೊಂಡ ವರದಿ ನೀಡುವುದಕ್ಕೆ ಸೂಚಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಅಧಿಕಾರಿಗಳ ವಿಚಾರಣೆ ಮತ್ತು ತನಿಖೆಗಾಗಿ ಲೋಕಾಯುಕ್ತ ಇಲಾಖೆಗೆ ಬಿಬಿಎಂಪಿಯಿಂದ ಅನುಮತಿ ನೀಡಲಾಗಿದೆ. ಸಹಾಯಧನ ಯೋಜನೆಯಡಿ ಹಣ ಬಿಡುಗಡೆಯಾಗಿರುವ ಕುರಿತು ವಲಯ ಮಟ್ಟದಿಂದ ಮಾಹಿತಿ ಪಡೆಯಲಾಗಿದೆ.

-ಮಂಜುನಾಥ ಸ್ವಾಮಿ, ಉಪ ಆಯುಕ್ತ, ಪಾಲಿಕೆ ಆಡಳಿತ.

Share this article