ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ವಿವಿಧ ಪ್ರಗತಿಪರ ಸಂಘಟನೆಗಳ ಖಂಡನೆ

KannadaprabhaNewsNetwork | Updated : Nov 06 2024, 12:52 AM IST

ಸಾರಾಂಶ

ಸಾಂಸ್ಕೃತಿಕ ನಗರಿ ಎಂದೇ ಹೆಸರಾಗಿರುವ ಮೈಸೂರು ತನ್ನ ಮೂಲ ಸಾಂಸ್ಕೃತಿಕ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವಂತಿದೆ. ನಗರದ ಖಾಸಗಿ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದ ಯುವತಿಯ ಮೇಲೆ ನಡೆದಿರುವ ಅತ್ಯಾಚಾರವನ್ನು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇತರೆ ಪ್ರಗತಿಪರ ಸಂಘಟನೆಗಳು ಖಂಡಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಖಾಸಗಿ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದ ಯುವತಿಯ ಮೇಲೆ ನಡೆದಿರುವ ಅತ್ಯಾಚಾರವನ್ನು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪಿಯುಸಿಎಲ್, ಸಮತಾ ವೇದಿಕೆ, ಸಮತಾ ಅಧ್ಯಯನ ಕೇಂದ್ರ, ಧ್ವನಿ ಮಹಿಳಾ ಒಕ್ಕೂಟ, ಎಐಎಮ್‌ಎಸ್‌ಎಸ್‌ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಖಂಡಿಸಿದೆ.

ಸಾಂಸ್ಕೃತಿಕ ನಗರಿ ಎಂದೇ ಹೆಸರಾಗಿರುವ ಮೈಸೂರು ತನ್ನ ಮೂಲ ಸಾಂಸ್ಕೃತಿಕ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವಂತಿದೆ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಡಾ.ಇ. ರತಿರಾವ್‌, ಸಬೀಹ ಭೂಮಿಗೌಡ, ನಾ. ದಿವಾಕರ, ಸುಶೀಲಾ, ಕೆ.ಆರ್. ‌ಸುಮತಿ, ಸುಮನಾ, ಕಮಲ್‌ ಗೋಪಿನಾಥ್‌, ವಿ.ಪುರುಷೋತ್ತಮ್ ಹೇಳಿದ್ದಾರೆ.

ಇದು ಆಘಾತಕಾರಿ ಬೆಳವಣಿಗೆಯಾಗಿದ್ದು, ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಯುವಕರು ತಮ್ಮ ಗೆಳತಿಯರನ್ನು ಮತ್ತು ಸಹೋದ್ಯೋಗಿಗಳನ್ನು ನೋಡುವ, ಬಳಸಿಕೊಳ್ಳುವ, ಅವರ ಮೇಲೆ ದೌರ್ಜನ್ಯ ಎಸಗುವ ಮನಸ್ಥಿತಿಯು ತುಂಬ ಕಳವಳಕಾರಿಯಾಗಿದೆ. ಲಿಂಗ ಸೂಕ್ಷ್ಮತೆ, ಲೈಂಗಿಕ ಶಿಕ್ಷಣದ ಕೊರತೆಯು ಯುವಕರನ್ನು ರಾಕ್ಷಸತ್ವದತ್ತ ಸೆಳೆದಿರುವ ರೀತಿಯನ್ನು ಸಮಾಜವು ಗಂಭೀರವಾಗಿ ಯೋಚಿಸಬೇಕಿದೆ ಮತ್ತು ಸೂಕ್ಷ್ಮತೆಯನ್ನು ಬೆಳೆಸಬೇಕಿದೆ, ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸರ್ಕಾರದ ಆಡಳಿತ ಯಂತ್ರಗಳ ವೈಫಲ್ಯದ ಬಗ್ಗೆಯೂ ಯೋಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತೆಗೆ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಸಂಘಟನೆಗಳು ಆಗ್ರಹಿಸುತ್ತವೆ . ರಾಜ್ಯ ಸರ್ಕಾರ ಹಾಗೂ ಮೈಸೂರು ನಗರಾಡಳಿತವು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಇಂತಹ ಘಟನೆಗಳು ಪದೇಪದೇ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು, ಮೈಸೂರು ನಗರದ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಈ ಮೂಲಕ ಅವರು ಆಗ್ರಹಿಸಿದ್ದಾರೆ.ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳ ಸ್ಥಳ ಮಹಜರು

ಕನ್ನಡಪ್ರಭ ವಾರ್ತೆ ಮೈಸೂರು

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳೊಂದಿಗೆ ಪೊಲೀಸರು ಮಂಗಳವಾರ ಸ್ಥಳ ಮಹಜರು ನಡೆಸಿದರು.

ಆರೋಪಿಗಳಾದ ಶಲಾಂಕ್ ಹಾಗೂ ಶ್ರೇಯಸ್‌ ಎಂಬವರು ಭೇಟಿ ನೀಡಿದ್ದ ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು, ಸಿಸಿಟಿವಿ ಕ್ಯಾಮರಾಗಳ ದಾಖಲೆಗಳನ್ನು ವಶಕ್ಕೆ ಪಡೆದು, ನಂತರ ಯುವತಿ, ಆರೋಪಿಗಳು ಹಾಗೂ ಅವರ ಪೋಷಕರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಯುವತಿಯು ಶನಿವಾರ ಪಬ್‌ ಗೆ ತೆರಳಿದ್ದು, ಅಲ್ಲಿ ಶಲಾಂಕ್‌ ಪರಿಚಯವಾಗಿದ್ದ. ಪಾನಮತ್ತರಾದ ಬಳಿಕ ಅವರು ಹೆಬ್ಬಾಳಿನಲ್ಲಿರುವ ವಸತಿ ಗೃಹಕ್ಕೆ ತೆರಳಿದ್ದು, ಅಲ್ಲಿಗೆ ಶಲಾಂಕ್‌ ತನ್ನ ಸಂಬಂಧಿ ಶ್ರೇಯಸ್‌ ನನ್ನು ಕರೆಸಿಕೊಂಡಿದ್ದ. ಭಾನುವಾರ ಇವರ ನಡುವೆ ಮಾತಿನ ಚಕಮಕಿಯಾಗಿತ್ತು. ಈ ನಡುವೆ ವಸತಿ ಗೃಹದಲ್ಲಿ ತೆಗೆದಿದ್ದ ಖಾಸಗಿ ಚಿತ್ರಗಳನ್ನು ಆರೋಪಿಗಳು ಯುವತಿಯ ಸ್ನೇಹಿತನಿಗೆ ಕಳುಹಿಸಿದ್ದಾರೆ.

ಇದಾದ ನಂತರ ಯುವತಿ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಸೋಮವಾರ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Share this article