ಮಂಡ್ಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು : ಆರೋಪ

KannadaprabhaNewsNetwork |  
Published : Jun 02, 2025, 12:09 AM ISTUpdated : Jun 02, 2025, 04:28 AM IST
೧ಕೆಎಂಎನ್‌ಡಿ-೪ಮೃತ ಬಾಲಕಿ ಸಾನ್ವಿ | Kannada Prabha

ಸಾರಾಂಶ

 ಬಾಲಕಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

  ಮಂಡ್ಯ : ಬಾಲಕಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ ಸಾನ್ವಿ (7) ಮೃತ ಬಾಲಕಿ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೈಲ್ಸ್ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದಿತ್ತು. ತಂದೆ ನಿಂಗರಾಜು ಮೇ 29ರಂದು ಮಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಎಲ್ಲಾ ಪರೀಕ್ಷೆಯನ್ನು ನಡೆಸಿದ ವೈದ್ಯರು ಅಂದು ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆಸಿ ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಮೇ 30ರಂದು ಬೆಳಗ್ಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು.

ಮೇ 31 ರಂದು ಬೆಳಗ್ಗೆ ಡ್ರಿಪ್ ಮೂಲಕ ಬಾಲಕಿಗೆ ಔಷಧ ನೀಡಲಾಗುತ್ತಿತ್ತು. ಔಷಧ ನೀಡುತ್ತಿದ್ದಂತೆ ಬಾಲಕಿ ಸಾನ್ವಿ ಪ್ರಜ್ಞಾಹೀನ ಸ್ಥಿತಿ ತಲುಪಿದಳು. ರಾತ್ರಿ 10.30ರ ವೇಳೆಗೆ ಬಾಲಕಿಯ ಸಾವಿನ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದರು. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಬಾಲಕಿ ಸಾವಿಗೆ ಕಾರಣ, ವೈದ್ಯರ ನಿರ್ಲಕ್ಷ್ಯದಿಂದ ಸಾನ್ವಿ ಸಾವನ್ನಪ್ಪಿದ್ದಾಳೆ. ನಮಗೆ ಮಾಹಿತಿ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿರುವುದನ್ನು ನೋಡಿದರೆ ವೈದ್ಯರು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು.

ಚಿಕಿತ್ಸೆ ನೀಡಿದ ಮಿಮ್ಸ್ ಆಸ್ಪತ್ರೆ ವೈದ್ಯ ಡಾ.ದರ್ಶನ್ ಅವರು, ಬಾಲಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿಲ್ಲ. ಅಂಗಾಂಗ ವೈಫಲ್ಯದಿಂದ ಆಕೆ ಸಾವನ್ನಪ್ಪಿದ್ದಾಳೆ. ಬೇಕಾದರೆ ಎಲ್ಲಿ ಬೇಕಾದರೂ ಮರಣೋತ್ತರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು. ಆದರೂ ಪಟ್ಟು ಬಿಡದ ಪೋಷಕರು ಹಾಗೂ ಸಂಬಂಧಿಕರು ಬಾಲಕಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಾಲಕಿಗೆ ಅಂಗಾಂಗ ವೈಫಲ್ಯವಿತ್ತು ಎಂದು ವೈದ್ಯರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಅಂಗಾಂಗ ವೈಫಲ್ಯವಿರುವುದಾಗಿ ಸಹಿ ಮಾಡುವಂತೆ ವೈದ್ಯರು ಒತ್ತಾಯಿಸಿದ್ದರು. ಸಹಿ ಮಾಡಿದರೆ ಬಾಲಕಿಯ ಶವ ಕೊಡುತ್ತೇವೆ ಎಂದು ವೈದ್ಯರಿಂದ ಧಮಕಿ ಹಾಕಿದ್ದಾಗಿ ಮೃತ ಸಾನ್ವಿಯ ತಂದೆ ನಿಂಗರಾಜು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಕುಮಾರಿ, ಬಿ.ಹನುಮೇಶ್, ಎಂ.ವಿ.ಕೃಷ್ಣ, ಎನ್.ಎಲ್.ಭರತ್‌ರಾಜ್, ಸುನೀಲ್‌ಕುಮಾರ್, ನರಸಿಂಹಮೂರ್ತಿ ಇತರರಿದ್ದರು.

PREV
Read more Articles on

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!