ಶ್ಯೂರಿಟಿ ಇಲ್ಲದೆ ‘ಶ್ರೀಕಾರ್‌ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ’ ಯಿಂದ ಸಾಲ ಕೊಡಿಸುವುದಾಗಿ ವಂಚನೆ

KannadaprabhaNewsNetwork |  
Published : Nov 11, 2024, 01:16 AM ISTUpdated : Nov 11, 2024, 04:36 AM IST
ಹಣ  | Kannada Prabha

ಸಾರಾಂಶ

ಯಾವುದೇ ಶ್ಯೂರಿಟಿ ಇಲ್ಲದೆ ‘ಶ್ರೀಕಾರ್‌ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ’ ಯಿಂದ ಸಾಲ ಕೊಡಿಸುವುದಾಗಿ ನೂರಾರು ಮಹಿಳೆಯರಿಂದ ಲಕ್ಷಾಂತರ ರು. ಹಣ ಪಡೆದು ಬಳಿಕ ಸಾಲ ಕೊಡಿಸದೆ ವಂಚಿಸಿದ ಆರೋಪದಡಿ ತಾಯಿ-ಮಗಳು ಸೇರಿ ಮೂವರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

 ಬೆಂಗಳೂರು : ಯಾವುದೇ ಶ್ಯೂರಿಟಿ ಇಲ್ಲದೆ ‘ಶ್ರೀಕಾರ್‌ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ’ ಯಿಂದ ಸಾಲ ಕೊಡಿಸುವುದಾಗಿ ನೂರಾರು ಮಹಿಳೆಯರಿಂದ ಲಕ್ಷಾಂತರ ರು. ಹಣ ಪಡೆದು ಬಳಿಕ ಸಾಲ ಕೊಡಿಸದೆ ವಂಚಿಸಿದ ಆರೋಪದಡಿ ತಾಯಿ-ಮಗಳು ಸೇರಿ ಮೂವರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕುಂಬಳಗೋಡು ಸಮೀಪದ ಅಂಚೆಪಾಳ್ಯ ನಿವಾಸಿ ಶ್ವೇತಾ ಪಾಂಡ ಎಂಬುವವರು ನೀಡಿದ ದೂರಿನ ಮೇರೆಗೆ ರೇಷ್ಮಾ ಬಾನು, ಈಕೆಯ ಮಗಳು ತೌಸಿಯಾ ಅಂಜುಂ ಹಾಗೂ ಶ್ರೀಕಾರ್‌ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿರ್ದೇಶಕ ಎನ್ನಲಾದ ಆನಂದ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿ ರೇಷ್ಮಾ ಬಾನುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಏನಿದು ಪ್ರಕರಣ?:

ಶ್ವೇತಾ ಪಾಂಡ ಅವರು ಹಲವು ವರ್ಷಗಳಿಂದ ಧರ್ಮಸ್ಥಳ ಸಂಘದ ಮುಖ್ಯಸ್ಥರಾಗಿದ್ದು, ಹಲವು ಮಹಿಳೆಯರಿಗೆ ಪರಿಚಿತರಾಗಿದ್ದಾರೆ. 4 ತಿಂಗಳ ಹಿಂದೆ ರೇಷ್ಮಾ ಬಾನು ಎಂಬುವವರು ಮಹಿಳೆಯರಿಗೆ ಸಾಲ ಕೊಡಿಸುವ ಬಗ್ಗೆ ಸಾರ್ವಜನಿಕರಿಂದ ತಿಳಿದುಕೊಂಡಿದ್ದರು. ಅದರಂತೆ ಶ್ವೇತಾ, ಕ್ವೀನ್‌ ರಸ್ತೆಯ ಲೋಕ ಜನಶಕ್ತಿ ಪಕ್ಷದ ಕಚೇರಿಯಲ್ಲಿ ರೇಷ್ಮಾ ಬಾನು ಅವರನ್ನು ಭೇಟಿಯಾಗಿದ್ದಾರೆ.

ಈ ವೇಳೆ ರೇಷ್ಮಾ ಬಾನು, ಶ್ರೀಕಾರ್‌ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನಿಂದ 50 ಸಾವಿರ ರು. ಸಾಲ ಕೊಡಿಸುವುದಾಗಿ ಹೇಳಿದ್ದಾರೆ. ಈ ವೇಳೆ ಆಕೆಯ ಪುತ್ರಿ ತೌಸಿಯಾ ಅಂಜುಂ ಸಹ ಜತೆಯಲ್ಲಿದ್ದರು. ಸಾಲ ಪಡೆಯಲು ತಲಾ 2,500 ರು. ಪಾವತಿಸಿ ಬ್ಯಾಂಕ್‌ ಖಾತೆ ತೆರೆಯಬೇಕು ಎಂದು ಹೇಳಿದ್ದಾರೆ. ಇವರ ಮಾತು ನಂಬಿದ ಶ್ವೇತಾ ಈ ಸಾಲದ ಬಗ್ಗೆ ತಮ್ಮ ಧರ್ಮಸ್ಥಳ ಸಂಘದ 72 ಮಂದಿ ಸದಸ್ಯೆಯರ ಜತೆಗೆ ಚರ್ಚಿಸಿದ್ದಾರೆ. ಬಳಿಕ ಸಾಲ ಪಡೆಯಲು ಬ್ಯಾಂಕ್‌ ಖಾತೆ ತೆರೆಯುವ ಸಲುವಾಗಿ ತಲಾ 2,500 ರು.ನಂತೆ 72 ಸದಸ್ಯೆಯರಿಂದ ಒಟ್ಟು 1.80 ಲಕ್ಷ ರು. ಸಂಗ್ರಹಿಸಿ ಆ ಹಣವನ್ನು ದಾಖಲೆಗಳ ಸಮೇತ ರೇಷ್ಮಾ ಬಾನುಗೆ ನೀಡಿದ್ದಾರೆ.

ಹಲವು ಮಹಿಳೆಯರಿಂದ ಹಣ ಸಂಗ್ರಹ: ದೂರುದಾರರಾದ ಶ್ವೇತಾ ಪಾಂಡ ಅವರಿಗೆ ಪರಿಚಯವಿರುವ ತರಲುಮ್‌ ಸುಲ್ತಾನ್‌ ಮತ್ತು ಹನಿಯಾ ಎಂಬುವವರು ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಂಡು ಸಾಲ ಪಡೆಯಲು ಆಸಕ್ತಿ ತೋರಿದ 24 ಮಹಿಳೆಯರಿಂದ ತಲಾ 3 ಸಾವಿರ ರು.ನಂತೆ ಒಟ್ಟು 72 ಸಾವಿರ ರು. ಹಣ ಸಂಗ್ರಹಿಸಿದ್ದಾರೆ. ಅದೇ ರೀತಿ ರಿಜಾನಾ ಎಂಬುವವರು 40 ಜನ ಮಹಿಳೆಯರಿಂದ ತಲಾ 5 ಸಾವಿರ ರು.ನಂತೆ 2 ಲಕ್ಷ ರು. ಸಂಗ್ರಹಿಸಿ ಆ ಹಣವನ್ನು ಆರೋಪಿಗಳಾದ ರೇಷ್ಮಾ ಬಾನು ಮತ್ತು ಆಕೆಯ ಪುತ್ರಿ ತೌಸಿಯಾ ಅಂಜುಂಗೆ ನೀಡಿದ್ದಾರೆ.

15 ದಿನಗಳಲ್ಲಿ ಸಾಲ ಕೊಡಿಸುವ ಭರವಸೆ: ಆರೋಪಿ ರೇಷ್ಮಾ ಬಾನು 15 ದಿನಗಳೊಳಗೆ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಹಲವು ದಿನ ಕಳೆದರೂ ಸಾಲ ಕೊಡಿಸಲಿಲ್ಲ. ಈ ವೇಳೆ ಶ್ವೇತಾ ಅವರು ಹಲವು ಬಾರಿ ಕರೆ ಮಾಡಿದರೂ ರೇಷ್ಮಾ ಬಾನು ಸರಿಯಾಗಿ ಸ್ಪಂದಿಸಿಲ್ಲ. ಆಗ ರೇಷ್ಮಾ ಬಾನು ಎಚ್‌ವಿಎಸ್‌ ಕೋರ್ಟ್‌ ಕಟ್ಟಡದ 3ನೇ ಮಹಡಿಯಲ್ಲಿ ಹೊಸದಾಗಿ ಕಚೇರಿ ತೆರೆದಿರುವ ಬಗ್ಗೆ ಮಾಹಿತಿ ಪಡೆದ ಶ್ವೇತಾ, ಅ.28ರಂದು ರೇಷ್ಮಾ ಬಾನು ಅವರನ್ನು ಭೇಟಿಯಾಗಿ ಸಾಲದ ಬಗ್ಗೆ ವಿಚಾರಿಸಿದಾಗ, ಒಂದು ವಾರದೊಳಗೆ ಸಾಲ ಕೊಡಿಸುವುದಾಗಿ ಹೇಳಿದ್ದಾರೆ.

ಸಾಲ ಕೊಡಿಸದೆ ಆರೋಪಿಗಳಿಂದ ನಿಂದನೆ: ವಾರದ ಬಳಿಕವೂ ಸಾಲ ಕೊಡಿಸದೆ, ದೂರವಾಣಿ ಕರೆಗೂ ಸ್ಪಂದಿಸದ ಕಾರಣ ಶ್ವೇತಾ ಅವರು ತಮ್ಮ ಸಂಘದ ಸದಸ್ಯೆಯರ ಜತೆಗೆ ನ.9ರಂದು ಕಚೇರಿಗೆ ಭೇಟಿ ನೀಡಿ ರೇಷ್ಮಾ ಬಾನು ಅವರನ್ನು ಸಾಲದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಸಾಲದ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಆನಂದ್‌, ನಾವು ನಿಮಗೆ ಯಾವುದೇ ಸಾಲ ಕೊಡುವುದಿಲ್ಲ ಎಂದು ಏರು ದನಿಯಲ್ಲಿ ದಬಾಯಿಸಿದ್ದಾರೆ ಎಂದು ಶ್ವೇತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ