ಚಿನ್ನ ಅಕ್ರಮ ಸಾಗಣೆ ಕೇಸ್‌: ತರುಣ್‌ ಬೇಲ್‌ ಅರ್ಜಿ ವಜಾ - ಆರ್ಥಿಕ ಅಪರಾಧಗಳ ತಡೆ ವಿಶೇಷ ಕೋರ್ಟ್‌ ಆದೇಶ

ಸಾರಾಂಶ

ನಟಿ ರನ್ಯಾ ರಾವ್‌ ಭಾಗಿಯಾಗಿರುವ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ಎರಡನೇ ಆರೋಪಿ ತರುಣ್ ರಾಜು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಬೆಂಗಳೂರು ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ

ಬೆಂಗಳೂರು: ನಟಿ ರನ್ಯಾ ರಾವ್‌ ಭಾಗಿಯಾಗಿರುವ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ಎರಡನೇ ಆರೋಪಿ ತರುಣ್ ರಾಜು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಬೆಂಗಳೂರು ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಜಾಮೀನು ಕೋರಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್‌ ಅವರು ತೀರ್ಪು ನೀಡಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಿಚಾರಣೆ ವೇಳೆ ಆರೋಪಿ ಪರ ವಕೀಲರು, ತರುಣ್‌ರಾಜ್‌ ಅವರು ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಪೊಲೀಸರ ಬಳಿ ಸಾಕ್ಷ್ಯಗಳೇ ಇಲ್ಲ. ವಿದೇಶಕ್ಕೆ ತೆರಳಲು ರನ್ಯಾಗೆ ವಿಮಾನ ಟಿಕೆಟ್‌ ಕೊಡಿಸಿರುವುದೇ ತರುಣ್‌ ಎಂಬ ಡಿಆರ್‌ಐ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಚಿನ್ನವನ್ನು ಜಿನೀವಾಗೆ ಕೊಂಡೊಯ್ಯಲು ರನ್ಯಾಗೆ ತರುಣ್ ಹೇಳಿದ್ದಾನೆ ಎಂಬ ಆರೋಪದಲ್ಲಿ ಹುರುಳಿಲ್ಲ. ತರುಣ್‌ ಬಂಧಿಸಿರುವ ಡಿಆರ್‌ಐ ಅಧಿಕಾರಿಗಳು ಪೊಲೀಸರೇ ಅಲ್ಲ. ಬಂಧನಕ್ಕೆ ಡಿಆರ್‌ಐ ಅಧಿಕಾರಿಗಳು ಸೂಕ್ತ ಕಾರಣ ನೀಡಿಲ್ಲ. ಹಾಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.

ಈ ವಾದಕ್ಕೆ ಆಕ್ಷೇಪಿಸಿದ್ದ ಡಿಆರ್‌ಐ ಪರ ವಕೀಲರು, ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಮೊದಲ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ತರುಣ್ ಪಾತ್ರ ಸಾಬೀತಾಗಿದೆ. ಮಾ.3 ರಂದು ತರುಣ್ ದುಬೈನಿಂದ ಹೈದರಾಬಾದ್‌ಗೆ ಪ್ರಯಾಣ ಮಾಡಿದ್ದಾರೆ. ತರುಣ್ ರಾಜ್‌ ರನ್ಯಾಗೆ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದಾರೆ ಹಾಗೂ ತರುಣ್‌ ವಿಸಾ ಖಾತೆಗೆ ರನ್ಯಾ ಹಣ ಹಾಕಿದ್ದಾರೆ. ಮಾ.3ರಂದು ದುಬೈನಲ್ಲಿ ತರುಣ್ ಚಿನ್ನವನ್ನು ರನ್ಯಾಗೆ ತಲುಪಿಸಿ, ನಂತರ ಹೈದರಾಬಾದ್‌ಗೆ ಬಂದಿದ್ದಾರೆ. ತರುಣ್‌ ಬಂಧನದ ಮೆಮೊದಲ್ಲಿ ಆತ ಎಸಗಿರುವ ಅಪರಾಧ, ಬಂಧನ ಅಗತ್ಯ ಕಾರಣ ಸೇರಿ ಎಲ್ಲ ಅಂಶಗಳನ್ನೂ ಉಲ್ಲೇಖಿಸಲಾಗಿದೆ. ತರುಣ್ ಅಮೆರಿಕ ನಾಗರಿಕನಾಗಿದ್ದು, ಜಾಮೀನು ನೀಡಿದರೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಕೋರಿದ್ದರು.

Share this article