ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಗಡಿ ರಸ್ತೆಯ ಟೆಲಿಕಾಂ ಲೇಔಟ್ ನಿವಾಸಿ ಮದನ್ ಬಂಧಿತನಾಗಿದ್ದು, ಆರೋಪಿಯಿಂದ ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಸಾವಿರ ಬೆಲೆಯ 458 ಗ್ರಾಂ ಬೆಳ್ಳಿ ಹಾಗೂ ₹1.35 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ರವಿಪ್ರಕಾಶ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರ್ಥಿಕ ನಷ್ಟ ತಂದ ಸಂಕಷ್ಟ:ತನ್ನ ಕುಟುಂಬದ ಜತೆ ಟೆಲಿಕಾಂ ಲೇಔಟ್ ನೆಲೆಸಿದ್ದ ಮದನ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರ. ಕುಂಬಳಗೋಡು ಬಳಿ ಆತ ಅಲ್ಯೂಮಿನಿಯಂ ಉತ್ಪನ್ನಗಳ ಕಂಪನಿ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿ ಕಂಪನಿ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಯಿತು. ಆದರೆ ಈ ದುರಂತಕ್ಕೆ ಆತನಿಗೆ ವಿಮೆ ಸಿಗಲಿಲ್ಲ. ಇದರಿಂದ ₹68 ಲಕ್ಷ ನಷ್ಟವಾಗಿತ್ತು. ಹಣಕಾಸು ಸಮಸ್ಯೆಯಿಂದ ಪಾರಾಗಲು ಆತ ಕಳ್ಳತನಕ್ಕಿಳಿದನೆಂದು ತಿಳಿದು ಬಂದಿದೆ.
ಟೆಲಿಕಾಂ ಲೇಔಟ್‌ನಲ್ಲಿ 6ನೇ ಅಡ್ಡರಸ್ತೆಯಲ್ಲಿ ನೆಲೆಸಿದ್ದ ಮದನ್ ತಾಯಿ ಗೆಳತಿ ಐಮಾವತಿ ಅವರ ಪರಿಚಯ ಮದನ್‌ಗೆ ಇತ್ತು. ಹೀಗಾಗಿ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಅವರು ವಾಯು ವಿಹಾರಕ್ಕೆ ಹೋಗುವ ಸಂಗತಿ ತಿಳಿದ ಮದನ್, ಆ ಸಮಯದಲ್ಲಿ ಅವರ ಮನೆಗೆ ಕನ್ನ ಹಾಕಲು ಯೋಜಿಸಿದ್ದ. ಅಂತೆಯೇ ಜ.17ರಂದು ಐಮಾವತಿ ಅವರು ವಾಯು ವಿಹಾರಕ್ಕೆ ತೆರಳಿದ ಬಳಿಕ ಮರ ಕತ್ತರಿಸುವ ಯಂತ್ರದಿಂದ ಮನೆ ಬಾಗಿಲು ಕೊರೆದು ಒಳಗೆ ಹೋಗಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.