ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ವಿರುದ್ಧ ಹೈಕೋರ್ಟ್ ನಲ್ಲಿ ಮೊಕದ್ದೊಮ್ಮೆ ಹೂಡಲು ಗ್ರಾಪಂ ಸದಸ್ಯರ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಮದ್ದೂರು : ಪ್ರಸಕ್ತ ಸಾಲಿನ ನರೇಗಾ ಕಾಮಗಾರಿಗಳ ಕಾರ್ಯ ಆದೇಶ ನೀಡದೆ ಮತ್ತು ಕ್ರಿಯಾ ಯೋಜನೆಗಳನ್ನು ತಾಲೂಕಿನ 42 ಗ್ರಾಮ ಪಂಚಾಯ್ತಿಗಳಿಗೆ ವಾಪಸ್ ಕಳುಹಿಸಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ವಿರುದ್ಧ ಹೈಕೋರ್ಟ್ ನಲ್ಲಿ ಮೊಕದ್ದೊಮ್ಮೆ ಹೂಡಲು ಬುಧವಾರ ನಡೆದ ಗ್ರಾಪಂ ಸದಸ್ಯರ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ವಕೀಲ ಜಿ.ಎನ್.ಸತ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಪಂ ಸಿಇಒ, ತಾಪಂ ಇಒ ರಾಮಲಿಂಗಯ್ಯ ವಿರುದ್ಧ ಕಾನೂನು ಹೋರಾಟ ನಡೆಸಲು ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.
ತಾಲೂಕಿನ ಒಟ್ಟು 42 ಗ್ರಾಮ ಪಂಚಾಯ್ತಿಗಳು ನಿಯಮದಂತೆ ಗ್ರಾಮ ಸಭೆಗಳನ್ನು ನಡೆಸಿ ಸ್ಥಳೀಯರು ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ಆಧಾರವಾಗಿಟ್ಟುಕೊಂಡು ಕಾಮಗಾರಿಗಳನ್ನು ಜಿಪಂ ನಿಗದಿ ಪಡಿಸಿದ ಕೂಲಿ ಕಾರ್ಮಿಕರ ಆಯವ್ಯಯದಂತೆ ಒಟ್ಟು 187 ಕೋಟಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ತಾಪಂ ಮೂಲಕ ಜಿಪಂಗೆ ಯುಕ್ತ ದಾರಾ ತಂತ್ರಾಂಶದಲ್ಲಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು.
ಆದರೆ, ಜಿಪಂ ಸಿಇಒ ಮೌಖಿಕ ಆದೇಶದಂತೆ ಕಾನೂನುಬಾಹಿರವಾಗಿ ತಾಪಂ ಇಒ ಗ್ರಾಮ ಸಭೆಗಳ ಮುಖಾಂತರ ಸಿದ್ಧಪಡಿಸಿದ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯ್ತಿಗೆ ವಾಪಸ್ಸು ಕಳುಹಿಸಿ ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಗ್ರಾಪಂ ಪಿಡಿಒಗಳಿಗೆ ಅನಗತ್ಯ ಒತ್ತಡ ಹೇರಿ ಗ್ರಾಮ ಸಭೆಗಳನ್ನು ನಡೆಸದೆ, ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಮಾಡದೇ ಕೇವಲ 57 ಕೋಟಿಗೆ ಕ್ರಿಯ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಿದ್ದಾರೆ. ಇದು ಪಂಚಾಯತ್ ರಾಜ್ ಕಾಯ್ದೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮದ ವಿರುದ್ಧವಾಗಿದೆ.
ಈಗಾಗಲೇ 2024 -25ನೇ ಸಾಲಿನಲ್ಲಿ ಅನುಮೋದನೆಗೊಂಡು ಪ್ರಾರಂಭವಾಗದೆ ಇರುವ ಕಾಮಗಾರಿಗಳಿಗೆ ಆನ್ ಗೋಯಿಂಗ್ ನೀಡದೆ ಇದ್ದುದ್ದರಿಂದಗ್ರಾಪಂ ಸದಸ್ಯರ ಒಕ್ಕೂಟವು ಕಳೆದ ಮಾ.12 ರಂದು ತಾಪಂ ಆವಣದಲ್ಲಿ ಅನಿರ್ದಿಷ್ಟ ಪ್ರತಿಭಟನೆ ಆರಂಭಿಸುವ ಮೂಲಕ ಪ್ರಾರಂಭಿಸಿತು.
ಮಾ.20 ರಂದು ನರೇಗಾ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಕಾರ ಆನ್ ಗೋಯಿಂಗ್ ನೀಡಲು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರು . ಆದರೆ, ತಾಪಂನವರು ಅದಕ್ಕೆ ಅನುಗುಣವಾಗಿ ಗ್ರಾಪಂ ದಾಖಲಾತಿ ಸಿದ್ಧಪಡಿಸಿಕೊಂಡು ಜಿಪಂಗೆ ಆನ್ ಗೋಯಿಂಗ್ ಪಡೆಯಲು ಮಂಡಿಸಿದರೂ ಕೂಡ ಜಿಪಂ ಸಿಇಒ ಅನುಮತಿ ನೀಡದೆ ಉದ್ದಟತನ ತೋರಿ ಕಾನೂನು ವಿರುದ್ಧ ನಡೆದುಕೊಂಡಿದ್ದಾರೆ.
ಆದ್ದರಿಂದ ಈ ಎರಡು ವಿಷಯಗಳಿಗೆ ಪರ್ಯಾಯ ಪಡೆಯಲು ತಾಲೂಕಿನ ಗ್ರಾಪಂ ಸದಸ್ಯರ ಒಕ್ಕೂಟವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾ ನೀಡಲು ನಿರ್ಧರಿಸಿದೆ. ಜೊತೆಗೆ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕೃಷ್ಣ, ಪದಾಧಿಕಾರಿಗಳಾದ ದಯಾನಂದ, ನಳಿನಿ, ಪುಟ್ಟರಾಮು, ವಿ.ಜಗದೀಶ್, ಮಂಜುಳಾ, ಪವಿತ್ರ, ಸುಧಾ, ತಮ್ಮಣ್ಣ, ಎಂ ಮಹೇಶ, ಸಿ ಶಿವಲಿಂಗಯ್ಯ, ವಿಜಯ್ ಗೌಡ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.