‘ಹೌ ಟು ಕಿಲ್’ ಪುಸಕ್ತ ಓದಿ ನಿದ್ರೆ ಮಾತ್ರೆ ತರಿಸಿ ರಿಯಲ್ ಎಸ್ಟೇಟ್ ಏಜೆಂಟ್ ಪತಿ ಹತ್ಯೆ ಮಾಡಿದ ಪತ್ನಿ

KannadaprabhaNewsNetwork |  
Published : Mar 27, 2025, 01:00 AM ISTUpdated : Mar 27, 2025, 04:33 AM IST
Hema bhai | Kannada Prabha

ಸಾರಾಂಶ

ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಹತ್ಯೆಗೂ ಮುನ್ನ ಆತನಿಂದಲೇ ನಿದ್ರೆ ಮಾತ್ರೆ ತರಿಸಿದ್ದಲ್ಲದೆ ‘ಹೌ ಟು ಕಿಲ್’ ಎಂಬ ಪುಸ್ತಕ ಓದಿ ಕೊಲೆಗೆ ಮೃತನ ಪತ್ನಿ ಹಾಗೂ ಅತ್ತೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಸೋಲದೇವನಹಳ್ಳಿ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

 ಬೆಂಗಳೂರು : ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಹತ್ಯೆಗೂ ಮುನ್ನ ಆತನಿಂದಲೇ ನಿದ್ರೆ ಮಾತ್ರೆ ತರಿಸಿದ್ದಲ್ಲದೆ ‘ಹೌ ಟು ಕಿಲ್’ ಎಂಬ ಪುಸ್ತಕ ಓದಿ ಕೊಲೆಗೆ ಮೃತನ ಪತ್ನಿ ಹಾಗೂ ಅತ್ತೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಸೋಲದೇವನಹಳ್ಳಿ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಕಳೆದ ಶನಿವಾರ ಬಿಳಿಜಾಜಿಹಳ್ಳಿ ಸಮೀಪದ ಬಿಜಿಎಸ್‌ ಲೇಔಟ್‌ನಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಲೋಕನಾಥ್‌ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ನಿ ಯಶಸ್ವಿನಿ ಹಾಗೂ ಅತ್ತೆ ಹೇಮಾ ಬಾಯಿಯನ್ನು ಬಂಧಿಸಿದ್ದ ಪೊಲೀಸರು, ಈ ಹತ್ಯೆ ಹಿಂದಿನ ಪೂರ್ವ ಸಿದ್ಧತೆ ಬಗ್ಗೆ ತನಿಖೆಗಿಳಿದಾಗ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ.

ಮೃತ ಲೋಕನಾಥ್ ಹಾಗೂ ಹೆಸರಘಟ್ಟ ಸಮೀಪದ ಕೆರೆಗುಡ್ಡದಹಳ್ಳಿ ಹೇಮಾ ಕುಟುಂಬವು ಸಂಬಂಧಿಕರಾಗಿದ್ದು, ಆತನ ಅಪರಾಧಿಕ ಚಟುವಟಿಕೆಗಳ ವಿಚಾರ ತಿಳಿದು ಆತನಿಂದ ಅವರು ಸಂಪರ್ಕ ಕಡಿತಗೊಂಡಿದ್ದರು. ಹೀಗಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಯಶಸ್ವಿನಿಯನ್ನು ಮರಳು ಮಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಈ ಸಂಗತಿ ತಿಳಿದು ಮಗಳಿಗೆ ಬುದ್ಧಿ ಹೇಳಿ ಲೋಕನಾಥ್ ಸಂಗದಿಂದ ಆಕೆಯ ಪೋಷಕರು ದೂರವಿರಿಸಿದ್ದರು. 1 ವರ್ಷ ಯಶಸ್ವಿನಿಯಿಂದ ದೂರವಿದ್ದ ಲೋಕನಾಥ್‌, ಆಕೆ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮತ್ತೆ ಸೆಳೆದು ಕಳೆದ ಡಿಸೆಂಬರ್‌ನಲ್ಲಿ ಕುಣಿಗಲ್‌ ಉಪ ನೋಂದಣಿಧಿಕಾರಿಯಲ್ಲಿ ಮದುವೆಯಾಗಿದ್ದರು.

ಮದುವೆ ಬಳಿಕ ಹಿಂಸೆ:

ಮದುವೆ ಬಳಿಕ ಲೋಕನಾಥ್, ‘ನಾನು ನಿನ್ನನ್ನು ವಿವಾಹವಾಗಿದ್ದೇ ಚಿತ್ರಹಿಂಸೆ ಕೊಡಲು. ನಿನ್ನ ತಂದೆ-ತಾಯಿಯನ್ನು ಸಹ ಜೀವ ಸಹಿತ ಉಳಿಸುವುದಿಲ್ಲ’ ಎಂದು ಪತ್ನಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಅವಳು ಬೇಕು ನೀನು ಬೇಕು ಎಂದಿದ್ದ. ಇದರಿಂದ ಯಶಸ್ವಿನಿ ಖಿನ್ನತೆಗೊಳಗಾಗಿದ್ದಳು. ಮಗಳ ಸ್ಥಿತಿ ಕಂಡು ಹೇಮಾ, ಏನಾಗಿದೆ ಎಂದು ವಿಚಾರಿಸಿದಾಗ ಎಲ್ಲ ವಿಚಾರ ತಿಳಿದಿದೆ. ಆಗ ಲೋಕನಾಥ್‌ ಜೀವಂತವಿದ್ದರೆ ನಾವು ಬದುಕಲು ಸಾಧ್ಯವಿಲ್ಲವೆಂದು ಕೊಲೆಗೆ ಸಂಚು ರೂಪಿಸಿದ್ದಾರೆ. ಯಶಶ್ವಿನಿ ಹಾಗೂ ಆಕೆಯ ಕುಟುಂಬದವರ ಬಗ್ಗೆ ಮಾಹಿತಿ ಸಂಗ್ರಹಿಸಲು ತನ್ನ ಸಹಚರರ ಮೂಲಕ ಆತ ಗೂಢಚಾರಿಕೆ ನಡೆಸಿದ್ದ. ಇದರಿಂದ ಆಕೆಗೆ ಮತ್ತಷ್ಟು ಭೀತಿ ಹೆಚ್ಚಾಯಿತು. ಈ ಆತಂಕದಿಂದಲೇ ಪತಿ ಕೊಲೆಗೆ ಯಶಸ್ವಿನಿ ಸಹ ಸಮ್ಮತಿಸಿದ್ದಳು ಎನ್ನಲಾಗಿದೆ.

ಚಪಾತಿ, ಪಲ್ಯದಲ್ಲಿ ನಿದ್ರೆ ಮಾತ್ರೆ:

ಅಂತೆಯೇ ಆನ್‌ಲೈನ್‌ನಲ್ಲಿ ಹೌ ಟು ಕಿಲ್ ಎಂಬ ಪುಸ್ತಕ ಖರೀದಿಸಿ ಅದನ್ನು ಓದಿ ಹತ್ಯೆ ಹೇಗೆ ಮಾಡಬೇಕು ಎಂದು ತಾಯಿ-ಮಗಳು ತಿಳಿದುಕೊಂಡಿದ್ದರು. ಊಟದಲ್ಲಿ ನಿದ್ರೆ ಮಾತ್ರೆ ಬೆರಸಿಕೊಟ್ಟು ಆತ ನಿದ್ರೆಗೆ ಜಾರಿದಾಗ ಕತ್ತು ಸೀಳಿ ಕೊಲ್ಲಲು ನಿರ್ಧರಿಸಿದ್ದರು. ಅದರಂತೆ ಹತ್ಯೆಗೂ 10 ದಿನಗಳ ಮುನ್ನ ತನ್ನ ಕಾಲೇಜಿನ ಸಹಪಾಠಿಗೆ ಆರೋಗ್ಯ ಸಮಸ್ಯೆ ಕಾರಣಕ್ಕೆ ನಿದ್ರೆ ಮಾತ್ರೆ ಬೇಕಿದೆ ಎಂದು ಪತಿಗೆ ಸುಳ್ಳು ಹೇಳಿ ಮಾತ್ರೆ ತರಿಸಿದ್ದಳು. ಆದರೆ, ಜೀವ ಭೀತಿಯಿಂದ ಗನ್‌ ಮ್ಯಾನ್‌ ಹೊಂದಿದ್ದ ಲೋಕನಾಥ್‌, ಬೆಂಗಳೂರಿಗೆ ಪತ್ನಿ ಭೇಟಿಗೆ ಬಂದಾಗ ಮಾತ್ರ ಏಕಾಂಗಿಯಾಗಿ ಬರುತ್ತಿದ್ದ. ಪೂರ್ವ ಯೋಜಿತ ಸಂಚಿನಂತೆ ಮನೆಯಲ್ಲಿ ಶನಿವಾರ ಚಪಾತಿ ಹಾಗೂ ಪಲ್ಯಕ್ಕೆ ಮೂರು ನಿದ್ರೆ ಮಾತ್ರೆ ಬೆರಸಿ ಬಾಕ್ಸ್‌ನಲ್ಲಿ ತುಂಬಿ ಮಗಳ ಜತೆ ಹೇಮಾ ಕಳುಹಿಸಿದ್ದಳು. ಇದನ್ನು ತಿಂದ ಲೋಕನಾಥ್‌ಗೆ 4 ತಾಸು ಕಳೆದರೂ ನಿದ್ರೆ ಬಂದಿಲ್ಲ. ಆನಂತರ 2 ಬಾಟಲ್ ಬಿಯರ್ ಕುಡಿದ ಬಳಿಕ ಆತನಿಗೆ ನಿದ್ರೆ ಮಂಪರು ಆ‍ವರಿಸಿದೆ.

ಅಷ್ಟರಲ್ಲಿ ಅಳಿಯ-ಮಗಳ ಹಿಂಬಾಲಿಸಿ ಆಟೋದಲ್ಲಿ ಬಂದಿದ್ದ ಹೇಮಾ, ಕಾರಿನ ಬಳಿಗೆ ಬಂದು ಏಕಾಏಕಿ ಲೋಕನಾಥ್ ಕುತ್ತಿಗೆ 2 ಬಾರಿ ಚಾಕುವಿನಿಂದ ಇರಿದಿದ್ದಾಳೆ. ಈ ಅನಿರೀಕ್ಷಿತ ದಾಳಿಯಿಂದ ಗಾಬರಿಗೊಂಡ ಲೋಕನಾಥ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅತ್ತ ಚಾಕು ಇರಿದು ತಾಯಿ-ಮಗಳು ಸಹ ಕಾಲ್ಕಿತ್ತಿದ್ದರು. ಆ ವೇಳೆ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದು ಲೋಕನಾಥ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!
ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ