ಹಾನಗಲ್ ಗ್ಯಾಂಗ್ ರೇಪ್ ಸಂತ್ರಸ್ತೆಯನ್ನು ಹಾವೇರಿಯ ಸಾಂತ್ವನ ಕೇಂದ್ರದಿಂದ ಉತ್ತರ ಕನ್ನಡದ ಶಿರಸಿ ಬಳಿ ಇರುವ ಆಕೆಯ ಸ್ವಗ್ರಾಮಕ್ಕೆ ಪೊಲೀಸರು ಭಾನುವಾರ ಬಿಟ್ಟು ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಹಾವೇರಿ
ಹಾನಗಲ್ ಗ್ಯಾಂಗ್ ರೇಪ್ ಸಂತ್ರಸ್ತೆಯನ್ನು ಹಾವೇರಿಯ ಸಾಂತ್ವನ ಕೇಂದ್ರದಿಂದ ಉತ್ತರ ಕನ್ನಡದ ಶಿರಸಿ ಬಳಿ ಇರುವ ಆಕೆಯ ಸ್ವಗ್ರಾಮಕ್ಕೆ ಪೊಲೀಸರು ಭಾನುವಾರ ಬಿಟ್ಟು ಬಂದಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಸಂತ್ರಸ್ತೆಯ ಭೇಟಿಗೆಂದು ಹಾವೇರಿಗೆ ಬರುವ ಮೊದಲೇ ಆಕೆಯನ್ನು ದಿಢೀರ್ ಸ್ಥಳಾಂತರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಪೊಲೀಸರು ಬೇಕೆಂದೇ ಈ ರೀತಿ ಮಾಡಿದ್ದಾರೆ.
ಬಿಜೆಪಿ ಮುಖಂಡರು ಸಂತ್ರಸ್ತೆಯನ್ನು ಭೇಟಿಯಾದರೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ರೀತಿ ದಿಢೀರ್ ಸ್ಥಳಾಂತರಿಸಲಾಗಿದೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಸಂತ್ರಸ್ತೆಗೆ ಸ್ಥಳ ಪರಿಶೀಲನೆ ಹೆಸರಿನಲ್ಲಿ ಯಾವುದೇ ಮಾಹಿತಿ ನೀಡದೆ ಶಿರಸಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದ್ದು, ಇದನ್ನು ಸಂತ್ರಸ್ತೆಯ ಕುಟುಂಬಸ್ಥರೂ ಖಚಿತಪಡಿಸಿದ್ದಾರೆ.
ಮತ್ತಿಬ್ಬರು ಆರೋಪಿಗಳ ಸೆರೆ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಈ ಕುರಿತು ಹಾವೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಅಂಶುಕುಮಾರ್, ಅಕ್ಕಿಆಲೂರಿನ ಇಮ್ರಾನ್ ಬಶೀರ್ ಅಹ್ಮದ್ ಜೇಕಿನಕಟ್ಟಿ (23) ಹಾಗೂ ರೇಹಾನ್ ಮಹ್ಮದ್ ಹುಸೇನ್ ವಾಲೀಕಾರ ಅಕ್ಕಿಆಲೂರ್ (19) ಬಂಧಿತರು.ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಇವರನ್ನು ಬಂಕಾಪುರ ಮತ್ತು ದಾವಣಗೆರೆಯಲ್ಲಿ ಬಂಧಿಸಲಾಗಿದೆ.
ಈ ಹಿಂದೆ ಅಪ್ತಾಬ್ ಚಂದನಕಟ್ಟಿ, ಮದರಸಾಬ್ ಮಂಡಕ್ಕಿ ಹಾಗೂ ಅಬ್ದುಲ್ಲಾಖಾದರ್ ಜಾಫರ್ ಸಾಬ್ ಹಂಚಿನಮನಿ ಎಂಬವರನ್ನು ಬಂಧಿಸಲಾಗಿತ್ತು. ಇನ್ನೊಬ್ಬ ಆರೋಪಿ ಮೊಹಮ್ಮದ್ ಸೈಫ್ ಸಾವಿಕೇರಿ ಎಂಬಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು ಎಂದು ತಿಳಿಸಿದರು.
ಮತ್ತೊಂದು ಪ್ರಕರಣದಲ್ಲೂ ಭಾಗಿ: ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ನೈತಿಕ ಪೊಲೀಸ್‌ಗಿರಿ ಮೆರೆದು ಹಲ್ಲೆ ನಡೆಸಿದ್ದ ವಿಡಿಯೋವೊಂದು ವೈರಲ್ ಆಗಿದ್ದು, ಆ ಕುರಿತು ಕೂಡ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗುತ್ತಿದೆ.
ಗ್ಯಾಂಗ್ ರೇಪ್ ಪ್ರಕರಣದಲ್ಲಿದ್ದ ಇಬ್ಬರು ಆರೋಪಿಗಳು ಆ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ಕೂಡ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಸಾಂತ್ವನ ಕೇಂದ್ರಕ್ಕೆ ಶಾಸಕ ಭೇಟಿ, ಆಕ್ಷೇಪ: ಈ ಮಧ್ಯೆ, ಹಾವೇರಿಯ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಯನ್ನು ಶನಿವಾರ ತಡರಾತ್ರಿ ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ್ ಅವರು ಭೇಟಿಯಾಗಿ ಸಾಂತ್ವನ ಹೇಳಿ, ₹೫೦ ಸಾವಿರ ನೆರವಿನ ಚೆಕ್ ನೀಡಿದ್ದಾರೆ.
ಮಹಿಳಾ ಪೊಲೀಸರು ಇಲ್ಲದಿದ್ದರೂ ಸಂತ್ರಸ್ತೆಯನ್ನು ಶಾಸಕರು ತಡರಾತ್ರಿ ಭೇಟಿ ಮಾಡಿರುವುದಕ್ಕೆ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿದೆ.ಈ ಕುರಿತು ಸ್ಪಷ್ಟನೆ ನೀಡಿರುವ ಎಸ್ಪಿ ಅಂಶುಕುಮಾರ್, ಸಾಂತ್ವನ ಕೇಂದ್ರ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ.
ರಾತ್ರಿ 11 ಗಂಟೆಗೆ ಬ್ಯಾಡಗಿ ಶಾಸಕರು ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿದ ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಂತ್ರಸ್ತೆ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಅವಕಾಶವಿದೆ. ಸ್ಥಳೀಯ ಠಾಣೆ ಇನ್‌ಸ್ಪೆಕ್ಟರ್ ವ್ಯಾಪ್ತಿಯಲ್ಲಿ ಸಾಂತ್ವನ ಕೇಂದ್ರ ಇರುವುದರಿಂದ ಅವರೂ ಅಲ್ಲಿಗೆ ಹೋಗಿರಬಹುದು. ಸಂತ್ರಸ್ತೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಉತ್ತರ ಕನ್ನಡ ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.