ಬೆಂಗಳೂರು : ವಿದ್ಯಾರ್ಥಿನಿ ಪ್ರಬುದ್ಧಾಳ ಕುತ್ತಿಗೆ ಹಾಗೂ ಕೈಯನ್ನು ಚಾಕುವಿನಿಂದ ಕೊಯ್ದ ಬಳಿಕ ಒಂದೂವರೆ ತಾಸು ಮನೆಯಲ್ಲೇ ಇದ್ದು ಆಕೆ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡು ಅಪ್ರಾಪ್ತ ಬಾಲಕ ತೆರಳಿದ್ದ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.
ತನ್ನ ಪರ್ಸ್‌ನಲ್ಲಿ ಕದ್ದ ₹2 ಸಾವಿರವನ್ನು ಮರಳಿಸುವಂತೆ ಕೇಳಿದ್ದಕ್ಕೆ ಪ್ರಬುದ್ಧಾಳನ್ನು ಆಕೆಯ ಸೋದರನ 14 ವರ್ಷದ ಗೆಳೆಯ ಕೊಲೆ ಮಾಡಿದ್ದ ಈ ಕೃತ್ಯದಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘೋರ ಸತ್ಯ ಬಾಯ್ಬಿಟ್ಟಿದ್ದಾನೆ.
ಕತ್ತು ಕೊಯ್ದು ಚಾಕು ತೊಳೆದು ಹೋದ: ಪ್ರಬುದ್ಧಾಳ ಮನೆಗೆ ಸಂಜೆ 4.30ಕ್ಕೆ ಆರೋಪಿತ ಬಾಲಕ ಬಂದಿದ್ದಾನೆ. ಆಗ ಹಣ ಕಳವು ಮಾಡಿದ್ದಕ್ಕೆ ಕ್ಷಮೆ ಕೋರಿದ್ದಾನೆ. ಇದಕ್ಕೆ ಪ್ರಬುದ್ಧಾ ಆಕ್ಷೇಪಿಸಿದ್ದಾಳೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ಕಾಲಿಗೆ ಬಿದ್ದು ಕ್ಷಮೆ ಕೋರಲು ಆತ ಮುಂದಾಗಿದ್ದಾನೆ. ಆಗ ಕಾಲು ಬಿಡಿಸಿಕೊಳ್ಳುವಾಗ ಕೆಳಗೆ ಬಿದ್ದ ಪರಿಣಾಮ ಪೆಟ್ಟಾಗಿ ಆಕೆಗೆ ಪ್ರಜ್ಞೆ ತಪ್ಪಿದೆ. ನಂತರ ನಡುಮನೆಯಿಂದ 5 ಅಡಿ ಅಂತರದ ಸ್ನಾನ ಗೃಹಕ್ಕೆ ಆಕೆಯನ್ನು ಎಳೆದುಕೊಂಡು ಆತ ಹೋಗಿದ್ದಾನೆ. ಬಳಿಕ ಅಡುಗೆ ಮನೆಗೆ ತೆರಳಿ ಅಲ್ಲಿ ತರಕಾರಿ ಕತ್ತರಿಸಲಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಸ್ನಾನದ ಮನೆ ಆತ ಹೋಗಿದ್ದಾನೆ.
ತರುವಾಯ ಮೊದಲು ಕೈಯನ್ನು ಚಾಕುವಿನಿಂದ ಕೊಯ್ದಿದ್ದಾನೆ. ಸುಮಾರು ಅರ್ಧ ತಾಸಿನ ಬಳಿಕ ಕೈಯಲ್ಲಿ ರಕ್ತ ಸೋರಿಕೆ ಕಡಿಮೆಯಾಗಿದೆ. ಆಗ ಕುತ್ತಿಗೆ ಕೊಯ್ದು ಕೆಲ ಹೊತ್ತು ಕಾದು ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾನೆ. ನಂತರ ಸ್ನಾನ ಗೃಹದಲ್ಲೇ ಚಾಕುವನ್ನು ತೊಳೆದು ಅಲ್ಲೇ ಇಟ್ಟು ಮುಂಬಾಗಿಲಿಗೆ ಒಳಗಿನಿಂದ ಚೀಲ ಹಾಕಿ ಹಿಂಬಾಗಿಲ ಮೂಲಕ ಆತ ಹೊರಹೋಗಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ಪ್ರಬುದ್ಧಳಾ ಮನೆ ಹತ್ತಿರದಲ್ಲೇ ಇದ್ದ ತನ್ನ ಮನೆಗೆ ತೆರಳಿದ್ದ. ಹೀಗಾಗಿ ಪ್ರಬುದ್ಧಾ ಮನೆಗೆ ಮಧ್ಯಾಹ್ನ 4.30ಕ್ಕೆ ಆತ ಬಂದರೆ ಕೃತ್ಯ ಎಸಗಿ ಸುಮಾರು 6.15 ಗಂಟೆಗೆ ಹೋಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ತೊದಲದೆ ಕೃತ್ಯ ವಿವರಿಸಿದ ಅಪ್ರಾಪ್ತ
ಈ ಕೃತ್ಯದ ಬಳಿಕ ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ವರ್ತನೆ ನೋಡಿ ಪೊಲೀಸರೇ ದಿಗಿಲು ಬಿದ್ದಿದ್ದಾರೆ. ತಾನೆಸಗಿದ ಭೀಕರ ಕೃತ್ಯದ ತೊದಲದೆ ಆತ ವಿವರಿಸಿದ್ದಾನೆ. ಅಲ್ಲದೆ ತನ್ನ ಕೃತ್ಯಕ್ಕೆ ಆತನಿಗೆ ಪಶ್ಚಾತ್ತಾಪ ಸಹ ಇರಲಿಲ್ಲ ಎಂದು ಮೂಲಗಳು ಹೇಳಿವೆ.
ಸಾರಿ ಎಂದು ಬರೆದಿದ್ದ ಬಾಲಕ
ಈ ಹತ್ಯೆ ಎಸಗಿದ ಬಳಿಕ ಪ್ರಬುದ್ಧಳಾ ನೋಟ್ ಬುಕ್‌ನಲ್ಲಿ ಮೂರು ಕಡೆ ಆಮ್ ಸಾರಿ ಎಂದು ಆತ ಬರೆದಿದ್ದ. ಇದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಆತನದ್ದಾಗಿತ್ತು ಎನ್ನಲಾಗಿದೆ.