;Resize=(412,232))
ಬೆಂಗಳೂರು : ಕರ್ತವ್ಯ ನಿರತ ಸಂಚಾರಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಕಾರು ಹರಿಸಿ ಗಾಯಗೊಳಿಸಿದ ವಿಮಾ ಕಂಪನಿಯ ಪ್ರಧಾನ ವ್ಯವಸ್ಥಾಪಕರ ವರ್ತನೆಗೆ ಕಿಡಿ ಕಾರಿರುವ ಹೈಕೋರ್ಟ್, ಆತನ ವಿರುದ್ಧದ ಕೊಲೆ ಯತ್ನ ಮತ್ತು ಜೀವ ಬೆದರಿಕೆ ಅಪರಾಧಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ತನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ನಾಗರಭಾವಿಯ ರಾಮಾಂಜಲು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ಕಾನೂನುಬದ್ಧವಾಗಿ ಕರ್ತವ್ಯವನ್ನು ನಿರ್ವಹಿಸುವ ಸಾರ್ವಜನಿಕ ಸೇವಕನ ಅಧಿಕಾರವನ್ನು ಕಾನೂನಿನ ವ್ಯಾಪ್ತಿಯನ್ನು ಮೀರಿದ ವ್ಯಕ್ತಿಯ ದುರಹಂಕಾರಕ್ಕೆ ಮಣಿಯುವಂತೆ ಮಾಡಲು ಸಾಧ್ಯವಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪರೀಕ್ಷಿಸದೆಯೇ ರದ್ದುಗೊಳಿಸಿದರೆ, ಕಾನೂನಿನ ನಿಯಮವು ಅದರ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದರಿಂದ ಅರ್ಜಿದಾರ ವಿಚಾರಣೆ ಎದುರಿಸಲಿ. ಆತನ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಅರ್ಜಿದಾರ ರಾಮಾಂಜಲು 2021ರ ಅ.23ರಂದು ಹುಂಡೈ ಕ್ರೆಟಾ ಕಾರನ್ನು ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿ ಚಲಾಯಿಸಿಕೊಂಡು ಬರುತ್ತಿದ್ದರು. ರಸ್ತೆಯಲ್ಲಿ ಕುಡಿದು ವಾಹನ ಚಲಾಯಿಸಿಕೊಂಡು ಬರುವವರನ್ನು ಪತ್ತೆಹಚ್ಚಲು ವಿಶೇಷ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಮುಬಾಕರ್ ಅಲಿ, ಅರ್ಜಿದಾರರ ಕಾರು ನಿಲ್ಲಿಸಲು ಮುಂದಾದರು. ಆದರೆ, ಅರ್ಜಿದಾರರು ತಮ್ಮ ಕಾರನ್ನು ನಿಲ್ಲಿಸದೆ ಸ್ಥಳದಿಂದ ರಭಸವಾಗಿ ಅಲಿ ಮೇಲೆ ಹರಿಸುವ ರೀತಿ ಚಲಾಯಿಸಿದ್ದರು.