ರನ್ಯಾ ರಾವ್‌ ಜಾಮೀನು ತೀರ್ಪು ಬಾಕಿ

KannadaprabhaNewsNetwork |  
Published : Apr 23, 2025, 02:06 AM IST
ರನ್ಯಾರಾವ್‌ | Kannada Prabha

ಸಾರಾಂಶ

ಚಿನ್ನ ಕಳ್ಳ ಸಾಗಾಣೆ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾರಾವ್‌ ಹಾಗೂ ಉದ್ಯಮಿ ತರುಣ್‌ ರಾಜು ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನ ಕಳ್ಳ ಸಾಗಾಣೆ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾರಾವ್‌ ಹಾಗೂ ಉದ್ಯಮಿ ತರುಣ್‌ ರಾಜು ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಜಾಮೀನು ಕೋರಿ ರನ್ಯಾ ರಾವ್‌ ಮತ್ತು ತರುಣ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿಗಳ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್‌ ಶೆಟ್ಟಿ ಅವರ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.

ವಿಚಾರಣೆ ವೇಳೆ ರನ್ಯಾ ರಾವ್‌ ಪರ ವಕೀಲರು, ವಿಮಾನ ನಿಲ್ದಾಣದಲ್ಲಿ ಅರ್ಜಿದಾರೆಯನ್ನು ತಪಾಸಣೆಗೆ ಒಳಪಡಿಸಿದ, ಅವರ ಮನೆಯ ಮೇಲೆ ದಾಳಿ ಶೋಧ ನಡೆಸಿ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿರುವ ಪ್ರಕ್ರಿಯೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಐಆರ್‌) ಅಧಿಕಾರಿಗಳು ಕಸ್ಟಮ್ಸ್‌ ಕಾಯ್ದೆಯ ನಿಯಮ ಉಲ್ಲಂಘಿಸಿದ್ದಾರೆ. ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ತಪಾಸಣೆ ಪ್ರಕ್ರಿಯೆ ನಡೆಸಬೇಕಿತ್ತು. ರನ್ಯಾ ಅವರನ್ನು ಬಂಧಿಸಿರುವ ಅಧಿಕಾರಿಯೇ ಗೆಜೆಟೆಡ್‌ ಅಧಿಕಾರಿ ಎಂಬುದಾಗಿ ತೋರಿಸಲಾಗಿದೆ ಮತ್ತು ಮನೆ ಶೋಧ ನಡೆಸಲಾಗಿದೆ. ರನ್ಯಾ ವಿರುದ್ಧದ ಆರೋಪಕ್ಕೆ ಏಳು ವರ್ಷದವರೆಗೆ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ರನ್ಯಾ 46 ದಿನಗಳಿಂದ ಜೈಲಿನಲ್ಲಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.

ತರುಣ್‌ ರಾಜು ಪರ ವಕೀಲರು, ರನ್ಯಾ ರಾವ್‌ ಜೊತೆಗೆ ಕಂಪನಿಯನ್ನು ಹೊಂದಿರುವ ಕಾರಣಕ್ಕೆ ಪ್ರಕರಣದಲ್ಲಿ ತರುಣ್‌ ಅವರನ್ನು ಸಿಲುಕಿಸಲಾಗಿದೆ. ರನ್ಯಾ ತಂದಿರುವ ಚಿನ್ನಕ್ಕೆ ಸುಂಕ ಪಾವತಿಸಿಲ್ಲ ಎಂದಾದರೆ, ಅದಕ್ಕೆ ಅವರನ್ನೇ ಜವಾಬ್ದಾರರನ್ನಾಗಿ ಮಾಡಬೇಕು. ಬದಲಿಗೆ ತನಿಖಾಧಿಕಾರಿಗಳು ತರುಣ್‌ ಅವರನ್ನು ಹೊಣೆಗಾರನನ್ನಾಗಿ ಮಾಡಲಾಗಿದೆ. ರನ್ಯಾಗೆ ದುಬೈನಲ್ಲಿ ಚಿನ್ನ ನೀಡಿದ ಆರೋಪ ಬಿಟ್ಟರೆ ಮತ್ಯಾವುದೇ ಆರೋಪ ತರುಣ್‌ ಮೇಲಿಲ್ಲ. ಹಾಗಾಗಿ, ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.

ಡಿಆರ್‌ಐ ಪರ ವಕೀಲರು, ರನ್ಯಾ ರಾವ್‌ ಹಾಗೂ ಇತರೆ ಆರೋಪಿಗಳು ಸುಮಾರು 100 ಕೆ.ಜಿ. ಚಿನ್ನವನ್ನು ಕಳ್ಳಸಾಗಾಣೆ ಮಾಡಿರುವ ಸಂಬಂಧ ಸಾಕ್ಷ್ಯಾಧಾರಗಳು ದೊರೆಯುತ್ತಿವೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ತರುಣ್‌ ಅಮೆರಿಕ ಪ್ರಜೆಯಾಗಿದ್ದಾರೆ. ದುಬೈನಲ್ಲಿ ಚಿನ್ನವನ್ನು ಖರೀದಿಸಿ ಜಿನಿವಾ ಅಥವಾ ಥೈಲ್ಯಾಂಡ್‌ಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿ ಬಳಿಕ ಬೆಂಗಳೂರಿನಲ್ಲಿ ಕಳ್ಳಸಾಗಾಣೆ ಮಾಡುವ ಸಲುವಾಗಿ ರನ್ಯಾ ರಾವ್‌ ಅವರಿಗೆ ಹಸ್ತಾಂತರಿಸುತ್ತಿದ್ದಾರೆ. ಈ ಇಬ್ಬರೂ ಒಟ್ಟು 31 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ. 25 ಬಾರಿ ಒಂದೇ ದಿನದಲ್ಲಿ ದುಬೈಗೆ ಹೋಗಿ ಮತ್ತೆ ಭಾರತಕ್ಕೆ ಹಿಂದಿರುಗಿದ್ದಾರೆ. ಆರೋಪಿಗಳ ಬಂಧನದ ವೇಳೆ ಕಾನೂನು ಪಾಲಿಸಲಾಗಿದೆ. ಅವರಿಗೆ ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಕೋರಿದರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!