- ತಾನೇ ಥಳಿಸಿ ಹಲ್ಲೆಗೆ ಒಳಗಾದ ಕತೆ ಕಟ್ಟಿದ್ದ ಅಧಿಕಾರಿ
- ಆನ್‌ಲೈನಲ್ಲಿ ಕನ್ನಡಿಗರ ಅಭಿಯಾನ । ಸವಾರ ಬಿಡುಗಡೆ
==ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಿಗ ಬೈಕ್ ಸವಾರನ ಮೇಲೆ ಅತ್ಯಂತ ಕ್ರೂರವಾಗಿ ವಿಂಗ್ ಕಮಾಂಡರೇ ಹಲ್ಲೆ ಮಾಡಿರುವುದು ದೃಶ್ಯಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಕನ್ನಡಿಗರು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಅತಿದೊಡ್ಡ ಅಭಿಯಾನವನ್ನೇ ನಡೆಸಿದ್ದಾರೆ. ಕನ್ನಡಿಗರ ಘನತೆಗೆ ಮಸಿ ಬಳಿಯಲು ಯತ್ನಿಸಿದ ಶಿಲಾದಿತ್ಯ ಬೋಸ್‌ನನ್ನು ಬಂಧಿಸಬೇಕು ಎಂಬ ಆಗ್ರಹ ಮುಗಿಲುಮುಟ್ಟಿದೆ. ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ. ಆದರೆ ಅದರಲ್ಲಿ ವಿಂಗ್ ಕಮಾಂಡರ್ ಹೆಸರಿನ ಬದಲು ಕಾರಿನ ಸಂಖ್ಯೆ ಆಧರಿಸಿ ದಾಖಲಿಸದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಕನ್ನಡಿಗನ ಮೇಲೆ ಭಾಷಾ ತಾರತಮ್ಯದ ಸುಳ್ಳು ಆರೋಪ ಮಾಡಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ಮೇಲೆ ವಿಂಗ್ ಕಮಾಂಡರ್ ಸುಳ್ಳು ಆರೋಪ ಹೊರಿಸಿದ್ದಾರೆ. ಇದರಿಂದ ನಾನು ಕೆಲಸ ಕಳೆದುಕೊಳ್ಳುವ ಸಂಕಷ್ಟ ಎದುರಾಗಿದೆ ಎಂದು ಸಂತ್ರಸ್ತ ವಿಕಾಸ್ ಕುಮಾರ್ ನೊಂದು ನುಡಿದ್ದಾರೆ. ವಿಂಗ್ ಕಮಾಂಡರ್‌ಗೂ ಸಾಮಾನ್ಯ ಜನರಿಗೆ ಒಂದೇ ಕಾನೂನಿರೋದು. ನನ್ನ ಮಗನ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್‌ನನ್ನು ಬಂಧಿಸಬೇಕು ಎಂದು ವಿಕಾಸ್ ಕುಮಾರ್ ತಾಯಿ ಜ್ಯೋತಿ ಆಗ್ರಹಿಸಿದ್ದಾರೆ.
ಹಳೇ ಮದ್ರಾಸ್ ರಸ್ತೆಯ ಗ್ರ್ಯಾಂಡ್ ಗೋಪಾಲನ್ ಮಾಲ್ ಬಳಿ ವಾಹನ ಹಿಂದಿಕ್ಕುವ ವಿಚಾರವಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ದಂಪತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಮಧ್ಯೆ ಸೋಮವಾರ ಗಲಾಟೆಯಾಗಿತ್ತು. ಈ ವೇಳೆ ಬೈಕ್ ಸವಾರನ ಮೇಲೆ ಮನಬಂದಂತೆ ಥಳಿಸಿ ವಿಂಗ್ ಕಮಾಂಡರ್ ರೋಷಾವೇಷ ತೋರಿಸಿದ್ದರು. ಈ ಹಲ್ಲೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೋಗಳು ಬಹಿರಂಗವಾಗಿ ಕಮಾಂಡರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಇದಕ್ಕೆ ಸವಾರ ಸಹ ಪ್ರತಿರೋಧ ತೋರಿದ್ದಾರೆ. ಕೊನೆಗೆ ಸ್ಥಳೀಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ. ಈ ಹಲ್ಲೆ ಸಂಬಂಧ ದೂರು-ಪ್ರತಿ ದೂರು ದಾಖಲಾಗಿದ್ದವು. ವಿಂಗ್ ಕಮಾಂಡರ್ ದೂರು ಆಧರಿಸಿ ಬೈಕ್ ಸವಾರ ವಿಕಾಸ್ ಕುಮಾರ್ ನನ್ನು ಸೋಮವಾರ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಇತ್ತ ಬೈಕ್ ಸವಾರನ ದೂರು ಆಧರಿಸಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ವಿಂಗ್ ಕಮಾಂಡರ್ ದಂಪತಿ ತಲೆಮರೆಸಿಕೊಂಡಿದ್ದಾರೆ.
ವಿಂಗ್ ಕಮಾಂಡ್ ಪತ್ನಿಗೆ ನೋಟಿಸ್:
ಬೈಕ್ ಸವಾರನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಶಿಲಾದಿತ್ಯ ಪತ್ನಿ ಮಧುಮಿತಾ ಅವರಿಗೆ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.ಈ ಗಲಾಟೆ ಸಂಬಂಧ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಹಾಗೂ ತಾವು ಮೊಬೈಲ್ ಚಿತ್ರೀಕರಿಸಿದ್ದರೆ ದೃಶ್ಯಾವಳಿ ಸೇರಿದಂತೆ ಕೆಲ ಮಾಹಿತಿ ಕೋರಿ ಮಧುಮಿತಾ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ಶಿಲಾದಿತ್ಯ ದಂಪತಿ ನಾಪತ್ತೆಯಾಗಿಲ್ಲ. ಸಿ.ವಿ.ರಾಮನ್ ನಗರದಲ್ಲೇ ಮನೆಯಲ್ಲೇ ಶಿಲಾದಿತ್ಯ ಪತ್ನಿ ಮಧುಮಿತಾ ಇದ್ದಾರೆ. ತಮ್ಮ ತಂದೆ ಶಸ್ತ್ರ ಚಿಕಿತ್ಸೆ ಸಲುವಾಗಿ ಕೋಲ್ಕತ್ತಾಗೆ ವಿಂಗ್ ಕಮಾಂಡರ್ ತೆರಳಿದ್ದಾರೆ. ಕೋಲ್ಕತ್ತಾದಿಂದ ಮರಳಿದ ನಂತರ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.