ನಲಪಾಡ್‌ ವಿರುದ್ಧದ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌; ಇಡಿ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ದಾಖಲಿಸಿದ್ದ ದೂರು

KannadaprabhaNewsNetwork | Updated : Feb 24 2024, 04:56 PM IST

ಸಾರಾಂಶ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಸೋನಿಯಾ ಗಾಂಧಿ ಮತ್ತು ರಾಹುಲ್   ವಿಚಾರಣೆ ನಡೆಸಿದ್ದಇಡಿ ಕ್ರಮ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ನಲಪಾಡ್‌ ವಿರುದ್ಧ ಶಿವಾಜಿನಗರ ಠಾಣಾ ಪೊಲೀಸರು ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಎಐಸಿಸಿ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇಡಿ) ಕ್ರಮ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವಿರುದ್ಧ ಶಿವಾಜಿನಗರ ಠಾಣಾ ಪೊಲೀಸರು ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬಂಧ ಶಿವಾಜಿನಗರ ಠಾಣಾ ಪೊಲೀಸರು ದಾಖಲಿಸಿದ್ದ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ 42ನೇ ಮ್ಯಾಜಿಸ್ಟ್ರೇರ್ಟ್ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಮೊಹಮ್ಮದ್‌ ನಲಪಾಡ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಇದೇ ಪ್ರಕರಣ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧದ ದೂರು ಹಾಗೂ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ರದ್ದುಪಡಿಸಿ ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ಈ ಹಿಂದೆ ಆದೇಶಿಸಿತ್ತು. ಆ ಆದೇಶ ಆಧರಿಸಿ ನಲಪಾಡ್‌ ವಿರುದ್ಧದ ಪ್ರಕರಣವನ್ನೂ ರದ್ದುಪಡಿಸಲಾಗಿದೆ.

ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ 2022ರ ಜೂ.16ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಅರ್ಜಿದಾರ ಮೊಹಮ್ಮದ್‌ ನಲಪಾಡ್‌ ಸೇರಿದಂತೆ ಕೆಪಿಸಿಸಿಯ ಇತರೆ ಮುಖಂಡರು ಹಾಗೂ ಸುಮಾರು 800 ಅಧಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಶಿವಾಜಿನಗರ ಠಾಣಾ ಸಬ್‌ ಇನ್ಸ್‌ಪೆಕ್ಟರ್‌ ಆರ್‌.ಶರತ್‌ ಬಾಬು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್‌ ಸೂಚನೆ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಪೂರ್ವಾನುಮತಿಯಿಲ್ಲದೆ ಪ್ರತಿಭಟನೆ ನಡೆಸಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಂಡಿತ್ತು. ಇದರಿಂದ ಹೈಕೋರ್ಟ್‌ ಮೊರೆ ಹೋಗಿದ್ದ ಅರ್ಜಿದಾರರು, ದುರುದ್ದೇಶಪೂರಿತ ಮತ್ತು ದ್ವೇಷಭಾವನೆಯಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ದೂರು ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು.

Share this article