ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ; ಇಬ್ಬರ ಬಂಧನ

KannadaprabhaNewsNetwork |  
Published : Feb 24, 2024, 02:31 AM ISTUpdated : Feb 24, 2024, 03:42 PM IST
Crime News

ಸಾರಾಂಶ

ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಮೃತನ ಮನೆ ಮಾಲಿಕ ಸೇರಿದಂತೆ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಮೃತನ ಮನೆ ಮಾಲಿಕ ಸೇರಿದಂತೆ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವರಚಿಕ್ಕನಹಳ್ಳಿ ನಿವಾಸಿ ಆನಂದ್‌ (32) ಹತ್ಯೆಯಾದ ದುರ್ದೈವಿ. 

ಈ ಹತ್ಯೆ ಸಂಬಂಧ ಮೃತನ ಮನೆ ಮಾಲಿಕ ಮಹೇಂದ್ರ ಹಾಗೂ ಆತನ ಸ್ನೇಹಿತ ಹರ್ಷಿತ್‌ನನ್ನು ಬಂಧಿಸಲಾಗಿದೆ. ಬೇಗೂರು ಸಮೀಪದ ಬಾರ್‌ನಲ್ಲಿ ಗುರುವಾರ ಬೆಳಗ್ಗೆ ಮದ್ಯ ಸೇವಿಸಿದ ಬಳಿಕ ಮಹೇಂದ್ರ ಹಾಗೂ ಆನಂದ್ ಮಧ್ಯೆ ಜಗಳವಾಗಿದೆ. 

ಆಗ ಕೋಪಗೊಂಡ ಮಹೇಂದ್ರ, ತನ್ನ ಸ್ನೇಹಿತ ಹರ್ಷಿತ್ ಜತೆ ಸೇರಿಕೊಂಡು ಆನಂದ್‌ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ರಸ್ತೆ ಬದಿ ಆತನನ್ನು ಎಸೆದು ಹೋಗಿದ್ದರು. 

ಕೂಡಲೇ ಗಾಯಾಳುವನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲು ನೆರವಾದರು. ಆದರೆ ತೀವ್ರ ರಕ್ತಸ್ರಾವದಿಂದ ಆನಂದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಹೋಟೆಲ್‌ನಲ್ಲಿ ಪಾತ್ರೆ ಕಳವು: ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಆನಂದ್‌, ಬೇಗೂರು ಬಳಿ ರಘುಗೌಡ ಎಂಬುವರಿಗೆ ಸೇರಿದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್‌ ಸಮೀಪದಲ್ಲೇ ಇದ್ದ ಮಹೇಂದ್ರನಿಗೆ ಸೇರಿದ ಮನೆಯಲ್ಲಿ ಆನಂದ್‌ ನೆಲೆಸಿದ್ದ. 

ಇನ್ನು ಹಲವು ವರ್ಷಗಳಿಂದ ಆನಂದ್ ಹಾಗೂ ಆತನ ಸೋದರನಿಗೆ ಮಹೇಂದ್ರ ಪರಿಚಿತನಾಗಿದ್ದು, ಈ ಗೆಳೆತನದಲ್ಲಿ ಆಗಾಗ್ಗೆ ಮದ್ಯ ಪಾರ್ಟಿ ನಡೆಯುತ್ತಿದ್ದವು. 

ಇತ್ತೀಚಿಗೆ ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಪಾತ್ರೆಗಳನ್ನು ಕಳವು ಮಾಡಿದ ಆರೋಪ ಆನಂದ್ ಮೇಲೆ ಕೇಳಿ ಬಂದಿತ್ತು. ಇದೇ ವಿಚಾರವಾಗಿ ತಿಳಿದು ಆತನಿಗೆ ಮಹೇಂದ್ರ ಬುದ್ಧಿಮಾತು ಹೇಳಿದ್ದ. 

ಮನೆ ಸಮೀಪ ಬಾರ್‌ಗೆ ಗುರುವಾರ ಬೆಳಗ್ಗೆ 9 ಗಂಟೆಗೆ ಮಹೇಂದ್ರ ಹಾಗೂ ಸ್ನೇಹಿತ ರಾಮು ಜತೆ ಆನಂದ್ ಮದ್ಯ ಸೇವನೆ ತೆರಳಿದ್ದ. ಆಗ ಮೂರು ತಾಸು ಬಾರ್‌ನಲ್ಲಿ ಕಂಠಮಟ್ಟ ಮದ್ಯ ಸೇವಿಸಿದ ಬಳಿಕ ಪಾತ್ರೆ ಕಳ್ಳತನ ವಿಚಾರ ಪ್ರಸ್ತಾಪಿಸಿ ಆನಂದ್‌ಗೆ ಮಹೇಂದ್ರ ಬೈದಿದ್ದಾನೆ. 

ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆನಂದ್‌, ಮಹೇಂದ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪೆಟ್ಟು ತಿಂದು ಕೆರಳಿದ ಮಹೇಂದ್ರ, ತನ್ನ ಸ್ನೇಹಿತ ಹರ್ಷಿತ್‌ಗೆ ಕರೆ ಮಾಡಿ ನೆರವಿಗೆ ಕರೆಸಿಕೊಂಡಿದ್ದಾನೆ. 

ಈ ಗಲಾಟೆ ಬಳಿಕ ಅಲ್ಲಿಂದ ರಾಮು ತೆರಳಿದ್ದಾನೆ. ಆನಂತರ ಬಾರ್‌ನಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹುಳಿಮಾವು ಸಮೀಪದ ಗುಡ್ಡಕ್ಕೆ ಆರೋಪಿಗಳು ಕರೆದೊಯ್ದಿದ್ದಾರೆ. 

ಅಲ್ಲಿ ದೊಣ್ಣೆಯಿಂದ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹೈರಾಣ ಮಾಡಿದ್ದಾನೆ. ನಂತರ ಕರೆತಂದು ಬೇಗೂರು ಸಮೀಪ ರಸ್ತೆ ಬದಿ ಆನಂದ್‌ನನ್ನು ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. 

ಈ ಘಟನೆ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತ ಆನಂದ್ ಪೂರ್ವಾಪರ ವಿಚಾರಿಸಿದಾಗ ಆರೋಪಿಗಳ ಜಾಡು ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಿಕ್ಷುಕನಿಗೆ ಕಲ್ಲಿನ ಹೊಡೆದು ಕೊಂದ್ರು: ಇನ್ನು ಹಣದ ವಿಚಾರವಾಗಿ 70 ವರ್ಷದ ಭೀಕ್ಷಕನನ್ನು ಕಲ್ಲಿನಲ್ಲಿ ಹೊಡೆದು ಹತ್ಯೆ ಮಾಡಿದ ಆರೋಪ ಮೇರೆಗೆ ಇಬ್ಬರು ಅಪ್ರಾಪ್ತರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಿಂಗರಾಜಿಪುರ ಸಮೀಪ ಶುಕ್ರವಾರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಆಗ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಭಿಕ್ಷುಕನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಸಂಗತಿ ಬಯಲಾಗಿದೆ. 

ಈ ಸುಳಿವು ಆಧರಿಸಿ ಆರೋಪಿತ 16 ವರ್ಷದ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣದ ವಿಚಾರವಾಗಿ ಗುರುವಾರ ರಾತ್ರಿ ಮೃತನ ಜತೆ ಆರೋಪಿಗಳಿಗೆ ಜಗಳವಾಗಿದೆ. 

ಆಗ ಆತನಿಗೆ ಕಲ್ಲಿನ ಹೊಡೆದು ಅಪ್ರಾಪ್ತ ಬಾಲಕರು ಪರಾರಿಯಾಗಿದ್ದರು. ಆಗ ತೀವ್ರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ರಾಮಮೂರ್ತಿ ಹೆಸರಿನಲ್ಲಿ ಯುವತಿಗೆ ಮೆಸೇಜ್‌, ಹಣಕ್ಕೆ ಬೇಡಿಕೆ
ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮ*ತ್ಯೆ