ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ನೇಣಿಗೆ ಶರಣು

KannadaprabhaNewsNetwork | Updated : Feb 24 2024, 04:59 PM IST

ಸಾರಾಂಶ

ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಬನಶಂಕರಿ 3ನೇ ಹಂತದ ಕೃಷ್ಣಯ್ಯ ಲೇಔಟ್‌ ನಿವಾಸಿಗಳಾದ ಆರ್‌.ಕೃಷ್ಣನಾಯ್ಡು (85) ಹಾಗೂ ಸರೋಜಮ್ಮ (74) ಮೃತ ದುರ್ದೈವಿಗಳು. ತಮ್ಮ ಮನೆ ಮಹಡಿ ಕೋಣೆಯಲ್ಲಿ ಕೃಷ್ಣನಾಯ್ಡು ದಂಪತಿ ಪ್ರತ್ಯೇಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಮೃತರ ಸೊಸೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಂಧ್ರಪ್ರದೇಶ ಮೂಲದ ಮೃತ ಕೃಷ್ಣ ನಾಯ್ಡು ಅ‍ವರು, ದಶಕಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಬನಶಂಕರಿಯ ಕೃಷ್ಣಯ್ಯಲೇಔಟ್‌ನಲ್ಲಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆ ಕಟ್ಟಡವಿದೆ. 

ಇದರಲ್ಲಿ ಮೊದಲ ಮಹಡಿಯಲ್ಲಿ ಅವರ ಪುತ್ರ ಅಶೋಕ್ ಕುಟುಂಬ ನೆಲೆಸಿದ್ದು, ಮಹಡಿಯ ಕೋಣೆಯಲ್ಲಿ ಕೃಷ್ಣನಾಯ್ಡು ಹಾಗೂ ಸರೋಜಮ್ಮ ವಾಸವಾಗಿದ್ದರು. 

ಈ ವೃದ್ಧ ತಂದೆ-ತಾಯಿಗೆ ಪುತ್ರ ಅಶೋಕ್‌ ಊಟೋಪಚಾರ ನೋಡಿಕೊಳ್ಳುತ್ತಿದ್ದರು. ಎಂದಿನಂತೆ ಬೆಳಗ್ಗೆ 9.30ರ ಸುಮಾರಿಗೆ ಅತ್ತೆ-ಮಾವನಿಗೆ ಉಪಾಹಾರ ನೀಡಲು ಮೃತರ ಸೊಸೆ ತೆರಳಿದ್ದರು. ಆಗ ನೇಣಿನ ಕುಣಿಕೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. 

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೀವನದಲ್ಲಿ ಬೇಸರಗೊಂಡು ವೃದ್ಧರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share this article