ಕನ್ನಡಪ್ರಭ ವಾರ್ತೆ ಮಂಡ್ಯ
ಮನೆ ಬೀಗ ಮುರಿದು 83 ಲಕ್ಷ ರೂ. ಮೌಲ್ಯದ ನಗ, ನಾಣ್ಯ ಕಳವು ಮಾಡಿದ್ದ ನಾಲ್ವರು ಆರೋಪಿಗಳು ಹಾಗೂ ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ಓರ್ವ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಫಯಾಜ್, ಮಹಮದ್ ಮುನ್ನಾ, ಅಯೂಬ್, ಪ್ರಸಾದಿ ಹಾಗೂ ಆರೋಪಿಗಳಿಗೆ ಸಹಕಾರ ನೀಡಿದ್ದ ಪೊಲೀಸ್ ಪೇದೆ ಕೆಂಡಗಣ್ಣ ಬಂಧಿತ ಆರೋಪಿಗಳು ಎಂದು ಹೇಳಿದರು. ಮದ್ದೂರು ಪಟ್ಟಣದ ಕೆ.ಎಚ್.ನಗರ ನಿವಾಸಿ ಡಾ. ಚಂದ್ರು ಕಳೆದ ಜ.17ರಂದು ಮನೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಗೆ ಹೋಗಿದ್ದರು.
ಜ.18 ರಂದು ವಾಪಸ್ ಬಂದು ನೋಡಲಾಗಿ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು.ಮನೆ ಕೊಠಡಿಯಲ್ಲಿನ ಬೀರುನಲ್ಲಿದ್ದ ಒಂದೂವರೆ ಕೆ.ಜಿ. ಚಿನ್ನಾಭರಣಗಳು, 8 ಲಕ್ಷ ಕಳವು ಮಾಡಿರುವ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ಮದ್ದೂರು ಗ್ರಾಮಾಂತರ ಸಿಪಿಐ ವೆಂಕಟೇಗೌಡ ಮತ್ತು ತಂಡ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ತಿಪಟೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಂತರ ಆರೋಪಿಗಳು ಹೈದರಾಬಾದ್, ಗೋವಾ, ಬೀದರ್, ಹಾಸನ ಇತರೆಡೆಗಳಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಅರಿತು ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ತಿಪಟೂರಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಿಂದ 1.486 ಕೆಜಿ ಚಿನ್ನಾಭರಣ, 1.70 ಲಕ್ಷ ರು. ನಗದು ಸೇರಿದಂತೆ 83 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕದ್ದಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಪೊಲೀಸ್ ಪೇದೆ ಕೆಂಡಗಣ್ಣ ಸಹಕಾರ ನೀಡಿದ್ದರೆಂಬ ಆರೋಪದ ಮೇರೆಗೆ ಆತನನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಮನೆಗಳ್ಳರ ಬಂಧನ: ಮತ್ತೊಂದು ಪ್ರಕರಣದಲ್ಲಿ ಮನೆ ಬೀಗ ಮುರಿದು ನಗದು ಸೇರಿದಂತೆ 67 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳಿಬ್ಬರನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.
ಮಳವಳ್ಳಿ ತಾಲೂಕು ರಾಮಂದೂರು ಗ್ರಾಮದ ಅಶೋಕ್‌ಕುಮಾರ್ (28) ಹಾಗೂ ಚಲುವರಾಜು (26) ಬಂಧಿತ ಆರೋಪಿಗಳು ಎಂದರು. ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯ ಅರ್ಜುನ್ ಅವರ ಮನೆ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಆರೋಪಿಗಳು ವಾಲ್‌ಡ್ರೂಪ್‌ನ ಡ್ರಾನಲ್ಲಿಟ್ಟಿದ್ದ 26 ಗ್ರಾಂ ತೂಕದ ಚಿನ್ನದ ಒಡವೆಗಳು, 20 ಸಾವಿರ ರು. ನಗದು ಹಣವನ್ನು ಕಳವು ಮಾಡಿದ್ದರು. ಈ ಬಗ್ಗೆ ಮನೆಯವರು ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಸಿಪಿಐ ಶ್ರೀಧರ್, ಪಿಎಸ್‌ಐ ಮಹೇಂದ್ರ, ಸತೀಶ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ತೊರೆಕಾಡನಹಳ್ಳಿ ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಂದ 67 ಲಕ್ಷ ರು ಮೌಲ್ಯದ 122 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.