ಸಿವಿಲ್‌ ಗುತ್ತಿಗೆದಾರನ ಹನಿಟ್ರ್ಯಾಪ್‌ ಪ್ರಕರಣ: ಮತ್ತೆ ಇಬ್ಬರ ಬಂಧನ - ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೆ ಏರಿಕೆ

KannadaprabhaNewsNetwork |  
Published : Jan 19, 2025, 02:16 AM ISTUpdated : Jan 19, 2025, 04:27 AM IST
Fraud couple arrested

ಸಾರಾಂಶ

ಇತ್ತೀಚೆಗೆ ಸಿವಿಲ್‌ ಗುತ್ತಿಗೆದಾರನನ್ನು ‘ಹನಿ ಟ್ರ್ಯಾಪ್‌’ ಖೆಡ್ಡಾಕೆ ಕೆಡವಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

  ಬೆಂಗಳೂರು : ಇತ್ತೀಚೆಗೆ ಸಿವಿಲ್‌ ಗುತ್ತಿಗೆದಾರನನ್ನು ‘ಹನಿ ಟ್ರ್ಯಾಪ್‌’ ಖೆಡ್ಡಾಕೆ ಕೆಡವಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಮಾಗಡಿ ಮುಖ್ಯರಸ್ತೆ ತುಂಗಾನಗರ ನಿವಾಸಿ ನಯನಾ (26) ಮತ್ತು ಆಕೆಯ ಸ್ನೇಹಿತ ಮೋಹನ್‌ (30) ಬಂಧಿತರು. ಈ ಹಿಂದೆ ಸಹಚರರಾದ ಅಜಯ್‌, ಸಂತೋಷ್‌ ಮತ್ತು ಜಯರಾಜ್‌ ಎಂಬುವವರನ್ನು ಬಂಧಿಸಲಾಗಿತ್ತು. ಆರೋಪಿಗಳು ಡಿ.9ರಂದು ಮಾಗಡಿ ರಸ್ತೆ ತುಂಗಾನಗರದ ಮನೆಯೊಂದಕ್ಕೆ ಗುತ್ತಿಗೆದಾರ ರಂಗನಾಥ (57) ಅವರನ್ನು ಕರೆದೊಯ್ದು ಬೆದರಿಸಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ದೂರುದಾರ ರಂಗನಾಥ ಸಿವಿಲ್‌ ಗುತ್ತಿಗೆದಾರರಾಗಿದ್ದು, ಕಳೆದ 6 ತಿಂಗಳ ಹಿಂದೆ ಶಿವು ಎಂಬ ಸ್ನೇಹಿತನ ಮುಖಾಂತರ ನಯನಾಳ ಪರಿಚಯವಾಗಿದೆ. ಬಳಿಕ ಈ ನಯನಾ ತನ್ನ ಮಗುವಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ರಂಗನಾಥ ಬಳಿ ಫೋನ್‌ ಪೇ ಮುಖಾಂತರ 14 ಸಾವಿರ ರು. ಪಡೆದಿದ್ದಳು. ಹೀಗೆ ಪ್ರತಿದಿನ ರಂಗನಾಥಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ಮನೆಗೆ ಕರೆಯುತ್ತಿದ್ದಳು. ಆದರೆ, ರಂಗನಾಥ ಹೋಗಿರಲಿಲ್ಲ. ಈ ನಡುವೆ ರಂಗನಾಥ ಕಾರ್ಯ ನಿಮಿತ್ತ ಡಿ.9ರಂದು ಬೆಳಗ್ಗೆ ಮಾಗಡಿ ರಸ್ತೆಯ ತುಂಗಾನಗರದ ಮಾರ್ಗವಾಗಿ ನೆಲಗದರನಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಾಗ ನಯನಾ, ಮಾತನಾಡಿಸಿ ಮನೆಗೆ ಕರೆದಿದ್ದಾಳೆ. ಆಗ ರಂಗನಾಥ ಆಕೆಯ ಮನೆಗೆ ತೆರಳಿ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ ಕ್ರೈಂ ಪೊಲೀಸರ ವೇಷದಲ್ಲಿ ಆರೋಪಿಗಳಾದ ಸಂತೋಷ್‌, ಅಜಯ್‌, ಜಯರಾಜ್‌ ಏಕಾಏಕಿ ಮನೆಗೆ ನುಗ್ಗಿದ್ದು, ನೀವು ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಾ? ಎಂದು ಬೆದರಿಸಿ 29 ಸಾವಿರ ರು. ನಗದು, ಮೈಮೇಲಿದ್ದ ₹5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಹಣ, ಚಿನ್ನಾಭರಣ ಸುಲಿಗೆ:

ಬಳಿಕ ಆರೋಪಿಗಳು ರಂಗನಾಥ ಅವರ ಬಳಿ 29 ಸಾವಿರ ರು. ನಗದು, ಮೈಮೇಲಿದ್ದ ಸುಮಾರು 5 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡಿದ್ದರು. ಮೊಬೈಲ್‌ ಫೋನ್‌ ಪೇ ಮುಖಾಂತರ 26 ಸಾವಿರ ರು. ಹಣ ವರ್ಗಾವಣೆ ಮಾಡಿಕೊಂಡು ಆಟೋ ಹತ್ತಿ ಪರಾರಿಯಾಗಿದ್ದರು. ನಯನಾ ಸಹ ದ್ವಿಚಕ್ರ ವಾಹನದಲ್ಲಿ ಆ ಆಟೋ ರಿಕ್ಷಾ ಹಿಂಬಾಲಿಸಿದ್ದಳು.

ದೂರು ಕೊಡೋಣ ಎಂದಿದ್ದಕ್ಕೆ ಬೆದರಿಕೆ ಹಾಕಿದಳು:

ಕೆಲ ಹೊತ್ತಿನ ಬಳಿಕ ರಂಗನಾಥ್‌ ಮೊಬೈಲ್‌ಗೆ ನಯನಾ ಕರೆ ಮಾಡಿದ್ದಾಳೆ. ಈ ವೇಳೆ ರಂಗನಾಥ, ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡೋಣ ಬಾ ಎಂದು ಕರೆದಿದ್ದಾರೆ. ಈ ವೇಳೆ ನಯನಾ, ಪೊಲೀಸ್‌ ದೂರು ನೀಡಿದರೆ, ನನ್ನ ಮಗುವನ್ನು ನಿನ್ನ ಮನೆಗೆ ಕರೆತಂದು ನನಗೂ ನಿನಗೂ ಸಂಬಂಧವಿದೆ ಎಂದು ಹೇಳುವುದಾಗಿ ಹೆದರಿಸಿದ್ದಳು. ಬಳಿಕ ರಂಗನಾಥ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು.

ಹಣವಂತರಿಗೆ ಬಲೆ :ಹಾಸನ ಮೂಲದ ನಯನಾ ವಿವಾಹಿತೆಯಾಗಿದ್ದು, ಪತಿಯಿಂದ ದೂರವಾಗಿದ್ದಾಳೆ. ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ನಯನಾ, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಹನಿಟ್ರ್ಯಾಪ್‌ ದಂಧೆಗೆ ಇಳಿದಿದ್ದಳು. ಸ್ನೇಹಿತರ ಮುಖಾಂತರ ಹಣವಂತರನ್ನು ಪರಿಚಯಿಸಿಕೊಂಡು ಬಳಿಕ ಮನೆಗೆ ಕರೆದೊಯ್ದು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಗ್ಯಾಂಗ್‌ ಮತ್ತಷ್ಟು ಜನರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ ಸುಲಿಗೆ ಮಾಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ನಾಯಿ ರಕ್ಷಣೆಗೆ ರಸ್ತೆ ಬದಿ ನಿಂತಿದ್ದ ಯುವತಿ ಮೈಮುಟ್ಟಿ ಇಂಜಿನಿಯರ್‌ ದುರ್ವರ್ತನೆ : ಬಂಧನ