ಬೈಕ್‌ಗಳ ನಡುವೆ ಭೀಕರ ಅಪಘಾತ: ಇಬ್ಬರು ಸಾವು

KannadaprabhaNewsNetwork | Published : Oct 16, 2023 1:46 AM

ಸಾರಾಂಶ

ಬೆಂಗಳೂರಿನ ಹೆಣ್ಣೂರು ಸಮೀಪದ ಹಜ್‌ ಭವನ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿ ಸೇರಿ ಇಬ್ಬರು ಮೃತಪಟ್ಟು, ಯುವಕನೊಬ್ಬನಿಗೆ ಗಾಯ
ಕನ್ನಡಪ್ರಭ ವಾರ್ತೆ ಬೆಂಗಳೂರು ಹೆಣ್ಣೂರು ಸಮೀಪದ ಹಜ್‌ ಭವನ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿ ಸೇರಿ ಇಬ್ಬರು ಮೃತಪಟ್ಟು, ಯುವಕನೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಅರುಣಾಚಲಪ್ರದೇಶ ಮೂಲದ ನೀಲಂ ಯಾಕುಂ(22) ಮತ್ತು ಹೈದರಾಬಾದ್‌ ಮೂಲದ ಅಂಕ ಬಾಬು(21) ಮೃತರು. ಬಂಗಾಳ ಮೂಲದ ಅಭಿಷೇಕ್‌ ಗಂಗೂಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀಲಂ ಯಾಕುಂ ಮತ್ತು ಅಭಿಷೇಕ್‌ ಥಣಿಸಂದ್ರ ಮುಖ್ಯರಸ್ತೆಯ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಂಕಬಾಬು ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ತಡರಾತ್ರಿ 12.15ರ ಸುಮಾರಿಗೆ ಹಜ್‌ ಭವನ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ನೀಲಂ ತಿರುಮೇನಹಳ್ಳಿಯ ಮಹಿಳಾ ಪೇಯಿಂಗ್‌ ಗೆಸ್ಟ್‌ನಲ್ಲಿ ಉಳಿದಿಕೊಂಡಿದ್ದರು. ಶನಿವಾರ ರಾತ್ರಿ ಕೆಲಸ ಮುಗಿಸಿದ್ದ ನೀಲಂ ಸಹೋದ್ಯೋಗಿ ಅಭಿಷೇಕ್‌ ಜತೆಗೆ ದ್ವಿಚಕ್ರ ವಾಹನದಲ್ಲಿ ಪೇಯಿಂಗ್‌ ಗೆಸ್ಟ್‌ಗೆ ತೆರಳುತ್ತಿದ್ದರು. ಥಣಿಸಂದ್ರ ಮುಖ್ಯರಸ್ತೆಯಲ್ಲಿ ಹಜ್‌ ಭವನ ದಾಟಿ ಕೊಂಚ ಮುಂದೆ ಹೋಗಿ ಅಭಿಷೇಕ್‌ ಯು ಟರ್ನ್‌ ತೆಗೆಯುವಾಗ ಹಿಂದಿನಿಂದ ಕೆಟಿಎಂ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಅಂಕಬಾಬು ಏಕಾಏಕಿ ಅಭಿಷೇಕ್‌ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಎರಡು ದ್ವಿಚಕ್ರ ವಾಹನದ ಮೂವರೂ ಸವಾರರ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ನೀಲಂ ತಲೆಗೆ ಗಂಭೀರ ಪೆಟ್ಟು ತೀವ್ರ ರಕ್ತಸ್ರಾವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅಭಿಷೇಕ್‌ ಮತ್ತು ಅಂಕ ಬಾಬುನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಲ್ಮೆಟ್‌ ಧರಿಸದ ಪರಿಣಾಮ ಅಂಕಬಾಬು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೆ ಅಂಕಬಾಬು ಮೃತಪಟ್ಟಿದ್ದಾನೆ. ಗಾಯಾಳು ಅಭಿಷೇಕ್‌ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಕಬಾಬು ತನ್ನ ಕೆಟಿಎಂ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಣ್ಣೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ---

Share this article