ಬೀದರ್‌ನಲ್ಲಿ ಭಾರಿ ಪ್ರಮಾಣದ ಮಾರಕಾಸ್ತ್ರ ಜಪ್ತಿ; ಇಬ್ಬರ ಸೆರೆ

KannadaprabhaNewsNetwork |  
Published : Jul 17, 2026, 01:45 AM IST
ಚಿತ್ರ 16ಬಿಡಿಆರ್2ಬೀದರ್‌ನಲ್ಲಿ ಮಾರಾಟ ಮಾಡಲೆತ್ನಿಸಿದ ದೇಶಿ ನಿರ್ಮಿತ ಪಿಸ್ತೂಲ್‌ಗಳು ಹಾಗೂ ತಲವಾರುಗಳ ಮಾರಾಟದ ಜಾಲ ಪತ್ತೆ ಮಾಡಿರುವ ಪೊಲೀಸರು. ಎಸ್‌ಪಿ ಪ್ರದೀಪ ಗುಂಟಿ ಅವರ ನೇತೃತ್ವದಲ್ಲಿ ಯಶಶ್ವಿಯಾದ ತಂಡ ಚಿತ್ರದಲ್ಲಿ ಕಾಣಬಹುದು. | Kannada Prabha

ಸಾರಾಂಶ

ಬೀದರ್‌ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯ ಮಹಿಳಾ ಪಿಎಸ್‌ಐ ತಸ್ಲಿಂ ಸುಲ್ತಾನಾ ಅವರಿಗೆ ಜುಲೈ 15ರಂದು ಸಂಜೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಭರ್ಜರಿ ಕಾರ್ಯಾಚರಣೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ಪೊಲೀಸರು ಭಾರಿ ಪ್ರಮಾಣದ ದೇಶಿ ನಿರ್ಮಿತ ಪಿಸ್ತೂಲ್‌ಗಳು ಹಾಗೂ ತಲವಾರುಗಳ ಮಾರಾಟದ ಜಾಲ ಪತ್ತೆ ಮಾಡಿರುವ ಬೆನ್ನಲ್ಲೇ, ಇದರ ಹಿಂದೆ ಯಾವುದಾದರೂ ವಿಧ್ವಂಸಕ ಕೃತ್ಯದ ಯೋಜನೆ ಇತ್ತೇ ಎಂಬ ಶಂಕೆಯಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಕುರಿತು ಇಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಮಾಹಿತಿ ನೀಡಿದರು.

ಬೀದರ್‌ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯ ಮಹಿಳಾ ಪಿಎಸ್‌ಐ ತಸ್ಲಿಂ ಸುಲ್ತಾನಾ ಅವರಿಗೆ ಜುಲೈ 15ರಂದು ಸಂಜೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ರಿಂಗ್‌ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ನಿಂತುಕೊಂಡು ದೇಶಿ ಪಿಸ್ತೂಲ್‌ಗಳನ್ನು ಮಾರಾಟ ಮಾಡಲು ಯತ್ನಿ ಸುತ್ತಿದ್ದ ಮಾಹಿತಿಯ ಮೇರೆಗೆ ಎಸ್‌ಪಿ ಪ್ರದೀಪ ಗುಂಟಿ ಹಾಗೂ ಎಎಸ್‌ಪಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಎಸ್‌ಡಿ ಸನದಿ ನೇತೃತ್ವದಲ್ಲಿ ಡಿಎಸ್‌ಪಿ ದೂದ್‌ ಪೀರ್‌ ಹುಸೇನಸಾಬ್‌ ಮುಲ್ಲಾ, ಡಿಎಆರ್‌ ಡಿಎಸ್‌ಪಿ ಶರಣಪ್ಪ, ಸಿಪಿಐ ಪಾಲಾಕ್ಷಯ್ಯ, ಜಿಎಸ್‌ ಬಿರಾದರ್‌ ಹಾಗೂ ಪೊಲೀಸ್‌ ಸಿಬ್ಬಂದಿಗಳಾದ ಎಂಡಿ ಆರೀಫ್‌, ಪ್ರಶಾಂತ್‌, ಅನೀಲ, ಹಣಮಂತ, ಮಲ್ಲಿಕಾರ್ಜುನ್‌, ಮಂಜುನಾಥ, ವರದರಾಜ್‌, ನವಾಜ್‌, ಗುರುನಾಥ್‌, ಶೇಖ್‌ ಮೊದೀನ್‌, ರಾಜಕುಮಾರ ದಾನಾ, ಮಲ್ಲಿಕಾರ್ಜುನ್‌, ಶಿವಶಣರಪ್ಪ, ವಿಶೇಷ ತಂಡದೊಂದಿಗೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳನ್ನು ಗುರುನಾನಕ್‌ ದೇವಸ್ಥಾನ ಪ್ರದೇಶದ ಹೊಟೆಲ್‌ ಕೆಲಸಗಾರ ಅಮನ್‌ಜೋತ್‌ಸಿಂಗ್‌ ರಂಜಿತ್‌ ಸಿಂಗ್‌ (21) ಮತ್ತು ಶಾಹಗಂಜ್‌ನ ಸಿದ್ಧಾರ್ಥ ಕಾಲೇಜು ವಿದ್ಯಾರ್ಥಿ ವೆಂಕಟೇಶ ತುಕಾರಾಮ್‌ (21) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಮಹಾರಾಷ್ಟ್ರದ ನಾಂದೇಡ್‌ನ ಮುಖ್ಯ ಪೂರೈಕೆದಾರ ಬಲ್ಬೀರ್‌ಸಿಂಗ್‌ @ ಶೇರು ಪ್ರತಾಪ್‌ಸಿಂಗ್‌ (23) ಹಾಗೂ ಮತ್ತೊಬ್ಬ ಬೀದರ್‌ ಮೂಲದ ವಿದ್ಯಾರ್ಥಿ ನವಜೋತ್‌ಸಿಂಗ್‌ ಇಂದೇರ್‌ಸಿಂಗ್‌ (24) ಎಂಬುವರ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಇವರಿಂದ ಸುಮಾರು 3.50ಲಕ್ಷ ರುಪಾಯಿ ಮೌಲ್ಯದ 5 ದೇಶಿ ನಿರ್ಮಿತ ನಾಡ ಪಿಸ್ತೂಲ್‌ಗಳು, 2.6ಲಕ್ಷ ರೂಪಾಯಿ ಮೌಲ್ಯದ 26 ಸಜೀವ ಗುಂಡುಗಳು, ಪರೀಕ್ಷಾರ್ಥವಾಗಿ ಹಾರಿಸಲಾಗಿದ್ದ 10 ಖಾಲಿ ಗುಂಡುಗಳು, 13 ಸಾವಿರ ರೂಪಾಯಿ ಮೌಲ್ಯದ 5 ಲಾಂಗ್‌ ತಲವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂಪಾಯಿ ಮೌಲ್ಯದ ಬಜಾಜ್‌ ಪಲ್ಸರ್‌ 220 ಬೈಕ್ ಸೇರಿದಂತೆ ಒಟ್ಟು 6.73 ಲಕ್ಷ ರುಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಗಳು ಈ ಮಾರಕಾಸ್ತ್ರಗಳನ್ನು ಮಹಾರಾಷ್ಟ್ರದ ನಾಂದೇಡ್‌ನ ಬಲ್ಬೀರ್‌ಸಿಂಗ್‌ ಮತ್ತು ಬೀದರ್‌ನ ನವಜೋತ್‌ಸಿಂಗ್‌ ಅವರಿಂದ ತಲಾ ಒಂದು ಪಿಸ್ತೂಲ್‌ಗೆ 70ಸಾವಿರ ರು.ಯಂತೆ ಹಾಗೂ ಒಂದು ಸಜೀವ ಗುಂಡಿಗೆ 10ಸಾವಿರ ರು.ಯಂತೆ ಖರೀದಿಸಿ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬೀದರ್‌ನಲ್ಲಿ ಇವುಗಳನ್ನು ತಲಾ 1 ಲಕ್ಷಕ್ಕೂ ಅಧಿಕ ಲಾಭಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಲು ತರಲಾಗಿತ್ತು ಎಂದು ತಿಳಿದುಬಂದಿದೆ. ಜಪ್ತಿಯಾದ ಪಿಸ್ತೂಲ್‌ಗಳು ಯಾವುದೇ ನೋಂದಣಿ ಸಂಖ್ಯೆ ಹೊಂದಿರದೆ, ಗುಂಡು ಹಾರಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದ್ದವು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಸಮಯಪ್ರಜ್ಞೆ ಮೆರೆದ ಪಿಎಸ್‌ಐ ತಸ್ಲಿಂ ಸುಲ್ತಾನಾ ಕಾರ್ಯಶ್ಲಾಘನೆ:

ಸಮಯಪ್ರಜ್ಞೆ ಮೆರೆದು ಅತ್ಯಂತ ಯಶಸ್ವಿಯಾಗಿ ದಾಳಿ ನಡೆಸಿ, ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಬೀದರ್‌ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯ ಮಹಿಳಾ ಪಿಎಸ್‌ಐ ತಸ್ಲಿಂ ಸುಲ್ತಾನಾ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಎಸ್ಪಿ ಪ್ರದೀಪ ಗುಂಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಶಸ್ತ್ರಾಸ್ತ್ರ ಜಪ್ತಿ; ನ್ಯಾಯಾಂಗ ಬಂಧನಕ್ಕೆ ಆರೋಪಿಗಳು:

ಇಷ್ಟೊಂದು ಭಾರಿ ಪ್ರಮಾಣದ ಮಾರಕಾಸ್ತ್ರಗಳ ಮಾರಾಟ ಮತ್ತು ಖರೀದಿ ಜಾಲವು ಯಾವುದೋ ವಿಧ್ವಂಸಕ ಕೃತ್ಯದ ಯೋಜನೆಯನ್ನು ಮುನ್ಸೂಚಿಸುವಂತಿದೆ. ಇಂಥ ದುರ್ಘಟನೆ ನಡೆಯುವ ಮುನ್ನವೇ ನಮ್ಮ ಪೊಲೀಸರು ಜಾಲ ಬೇಧಿಸಿದ್ದ, ಸಂತಸದಾಯಕ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಈ ಪೈಕಿ ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಪ್ರದೀಪ ಗುಂಟಿ ತಿಳಿಸಿದರು. ಈ ಮಾರಕಾಸ್ತ್ರಗಳನ್ನು ಖರೀದಿಸಲು ಯೋಜಿಸಿದ್ದ ಮತ್ತೊಬ್ಬ ಆರೋಪಿಯನ್ನೂ ಸಹ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುವದು. ಸಧ್ಯ ನಗರದ ಹೊರವಲಯದ ರಿಂಗ್‌ ರಸ್ತೆಯ ಜ್ಞಾನಸುಧಾ ಶಾಲೆಯ ಸಮೀಪ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸ್ತ್ರೀಯರ ಒಳ ಉಡುಪು ಕದ್ದು ಮತ್ತೆ ಇಟ್ಟು ಹೊಸ ಬಟ್ಟೆಗಳನ್ನು ಕದಿಯುತ್ತಿದ್ದವ ದುರುಳ ಬಂಧನ
ಶಾಲೆಯಲ್ಲಿ ಶಿಕ್ಷಕರು ಅವಮಾನ ಮಾಡಿದ್ದಕ್ಕೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ