ಕೌಟುಂಬಿಕ ವಿಚಾರಕ್ಕೆ ನಡೆದ ಜಗಳದಲ್ಲಿ ಪತಿಯೇ ಕಬ್ಬಿಣದ ರಾಡ್‌ನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಅಮಾನುಷ ಘಟನೆ
ಬೆಂಗಳೂರು : ಕೌಟುಂಬಿಕ ವಿಚಾರಕ್ಕೆ ನಡೆದ ಜಗಳದಲ್ಲಿ ಪತಿಯೇ ಕಬ್ಬಿಣದ ರಾಡ್‌ನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಅಮಾನುಷ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಲಘಟ್ಟಪುರದ ಕಾಳಪ್ಪ ಲೇಔಟ್ ನಿವಾಸಿ ಭಾಗ್ಯ (42) ಹತ್ಯೆಯಾದವರು. ಭಾನುವಾರ ಸಂಜೆ ಸಮಾರು 4.30ಕ್ಕೆ ಈ ಘಟನೆ ನಡೆದಿದೆ. ತಂದೆಯೇ ತಾಯಿಯ ಕೊಲೆ ಮಾಡಿರುವ ಬಗ್ಗೆ 22 ವರ್ಷದ ಪುತ್ರ ಅನುಮಾನ ವ್ಯಕ್ತಪಡಿಸಿದ್ದು, ತಂದೆ ಹಾಗೂ ಹತ್ಯೆಗೆ ಕುಮ್ಮಕ್ಕು ನೀಡಿದ ಇಬ್ಬರು ಸಂಬಂಧಿಕರ ವಿರುದ್ಧ ದೂರು ನೀಡಿದ್ದಾನೆ. ಈ ದೂರಿನ ಮೇರೆಗೆ ಮೃತಳ ಪತಿ ಶ್ರೀರಾಮ್ (48)ನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.
ಏನಿದು ಘಟನೆ?:
ಶ್ರೀರಾಮ್ ಮತ್ತು ಪತ್ನಿ ಭಾಗ್ಯ ಇಬ್ಬರು ಮಕ್ಕಳೊಂದಿಗೆ ಸುಮಾರು 20 ವರ್ಷಗಳಿಂದ ಕಾಳಪ್ಪ ಲೇಔಟ್‌ನಲ್ಲಿ ನೆಲೆಸಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶ್ರೀರಾಮ್ ಇತ್ತೀಚೆಗೆ ಕೆಲಸ ಬಿಟ್ಟು ನಿರುದ್ಯೋಗಿಯಾಗಿದ್ದ. ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕುಡಿತದ ಚಟ ಬಿಡಿಸುವ ಸಂಬಂಧ ಮದ್ಯ ವರ್ಜನ ಕೇಂದ್ರಕ್ಕೆ ಸೇರಿದ್ದ ಶ್ರೀರಾಮ್ 20 ದಿನಗಳ ಹಿಂದೆ ಮನೆಗೆ ಬಂದಿದ್ದ. ಆದರೂ ಚಟ ಮಾತ್ರ ಬಿಟ್ಟಿರಲಿಲ್ಲ.
ಗಲಾಟೆ ವೇಳೆ ಹತ್ಯೆ:ಭಾನುವಾರ ಸಂಜೆ ಮನೆಯಲ್ಲಿ ಭಾಗ್ಯ ಒಬ್ಬರೇ ಇದ್ದರು. ಪುತ್ರ ಮತ್ತು ಪುತ್ರಿ ಹೊರಗೆ ಹೋಗಿದ್ದರು. ಈ ವೇಳೆ ಮನೆಗೆ ಬಂದಿರುವ ಶ್ರೀರಾಮ್ ಪತ್ನಿ ಜತೆಗೆ ಜಗಳ ಶುರು ಮಾಡಿ ಹಲ್ಲೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹಲ್ಲೆ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪುತ್ರ ಮನೆಗೆ ಬಂದು ನೋಡಿದಾಗ ತಾಯಿ ಭಾಗ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.