ರಾಜಧಾನಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ದುಷ್ಟನೊಬ್ಬ ತನ್ನ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ಗೆ ತುಂಬಿದ ಘಟನೆ ಹಸಿರಾಗಿರುವಾಗಲೇ ಪತಿಯೇ ಪತ್ನಿಯನ್ನು ಚಾಕುನಿಂದ ಇರಿದು ಕೊಲೆಗೈದು ಮೃತದೇಹವನ್ನು ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ತುಂಬಿರುವ ಘಟನೆ ನಡೆದಿದೆ.
ಬೆಂಗಳೂರು : ರಾಜಧಾನಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ದುಷ್ಟನೊಬ್ಬ ತನ್ನ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ಗೆ ತುಂಬಿದ ಘಟನೆ ಹಸಿರಾಗಿರುವಾಗಲೇ ಪತಿಯೇ ಪತ್ನಿಯನ್ನು ಚಾಕುನಿಂದ ಇರಿದು ಕೊಲೆಗೈದು ಮೃತದೇಹವನ್ನು ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ತುಂಬಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಕಮ್ಮನಹಳ್ಳಿ ನಿವಾಸಿ ಗೌರಿ ಅನಿಲ್ ಸಾಂಬೇಕರ್(32) ಕೊಲೆಯಾದ ದುರ್ದೈವಿ. ಘಟನೆ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಆರೋಪಿ ಪತಿ ರಾಕೇಶ್ ರಾಜೇಂದ್ರ ಖೆಡೇಕರ್(36)ನನ್ನು ಪುಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗುರುವಾರ ಸಂಜೆ ಮನೆ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಮನೆಯ ಶೌಚಗೃಹದಲ್ಲಿದ್ದ ಸೂಟ್‌ಕೇಸ್‌ನಲ್ಲಿ ಗೌರಿ ಮೃತದೇಹ ಪತ್ತೆಯಾಗಿದೆ.
ತಿಂಗಳಿಂದ ನಗರದಲ್ಲಿ ವಾಸ:
ಮಹಾರಾಷ್ಟ್ರ ಮೂಲದ ಗೌರಿ ಮತ್ತು ರಾಕೇಶ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿ ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿದ್ದು, ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗೌರಿ ಸಮೂಹ ಸಂವಹನ ವಿಷಯದಲ್ಲಿ ಪದವಿ ವ್ಯಾಸಂಗ ಮಾಡಿದ್ದು, ಕೆಲಸದ ಹುಡುಕಾಟದಲ್ಲಿದ್ದರು. ಆರೋಪಿ ರಾಕೇಶ್ ಐಟಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮನೆ ಮಾಲೀಕಗೆ ಕರೆ:
ಆರೋಪಿ ರಾಕೇಶ್ ಮಾ.25ರಂದು ಪತ್ನಿ ಗೌರಿಯನ್ನು ಕೊಲೆಗೈದಿರುವ ಸಾಧ್ಯತೆಯಿದೆ. ಬಳಿಕ ಮೃತದೇಹವನ್ನು ಟ್ರ್ಯಾಲಿ ಸೂಟ್‌ಕೇಸ್‌ಗೆ ತುಂಬಿ ಸಾಗಿಸಲು ಪ್ರಯತ್ನಿಸಿದ್ದಾನೆ. ಸಾಧ್ಯವಾಗದೇ ಸೂಟ್‌ಕೇಸನ್ನು ಶೌಚಾಲಯದಲ್ಲಿ ಇರಿಸಿದ್ದಾನೆ. ನಂತರ ಮನೆಯ ಬಾಗಿಲು ಹಾಕಿಕೊಂಡು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ. ಗುರುವಾರ(ಮಾ.27) ಸಂಜೆ ಸುಮಾರು 5.30ಕ್ಕೆ ಮನೆ ಮಾಲೀಕರಿಗೆ ಕರೆ ಮಾಡಿರುವ ರಾಕೇಶ್, ವೈಯಕ್ತಿಕ ಕಾರಣಕ್ಕೆ ಪತ್ನಿ ಗೌರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.
ಪೊಲೀಸರು ದೌಡು, ಪರಿಶೀಲನೆ:
ಆರೋಪಿ ರಾಕೇಶ್ ಕರೆ ಬೆನ್ನಲ್ಲೇ ಮನೆ ಮಾಲೀಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಮನೆಯ ಶೌಚಾಲಯದಲ್ಲಿದ್ದ ಸೂಟ್‌ಕೇಸ್‌ನಲ್ಲಿ ಗೌರಿ ಮೃತದೇಹ ಪತ್ತೆಯಾಗಿದೆ. ಸೀನ್ ಆಫ್ ಕ್ರೈಂ ಅಧಿಕಾರಿಗಳ ತಂಡ ಮತ್ತು ಶ್ವಾನದಳ ಘಟನಾ ಸ್ಥಳವನ್ನು ಪರಿಶೀಲಿಸಿದೆ. ಮೃತದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾಗಿವೆ. ಬಳಿಕ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗೌರಿ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಳ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಅವರು ಮಹಾರಾಷ್ಟ್ರದಿಂದ ಬೆಂಗಳೂರು ನಗರದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಕರೆ ಆಧರಿಸಿ ಪುಣೆಯಲ್ಲಿ ಆರೋಪಿ ವಶ:
ಕೊಲೆ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹುಳಿಮಾವು ಠಾಣೆ ಪೊಲೀಸರು ಪತಿ ರಾಕೇಶ್ ಬಗ್ಗೆ ಅನುಮಾನಗೊಂಡು ಮೊಬೈಲ್ ಟ್ರ್ಯಾಕ್ ಮಾಡಿದಾಗ ಪುಣೆಯಲ್ಲಿ ಲೋಕೇಶನ್ ತೋರಿಸಿದೆ. ಬಳಿಕ ಪುಣೆ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಆರೋಪಿ ರಾಕೇಶ್ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪುಣೆ ಪೊಲೀಸರು ರಾಕೇಶ್‌ನ ಮೊಬೈಲ್ ಕರೆ ವಿವರ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಘಟನೆ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ನಗರ ಪೊಲೀಸರ ಒಂಡು ತಂಡ ಆರೋಪಿಯನ್ನು ವಶಕ್ಕೆ ಪಡೆಯಲು ಪುಣೆಯತ್ತ ಪ್ರಯಾಣ ಬೆಳೆಸಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಚಾಕು ಇರಿತದ ಗುರುತುಗಳು ಪತ್ತೆಯಾಗಿವೆ. ಘಟನೆ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
-ಸಾರಾ ಫಾತಿಮಾ, ಆಗ್ನೇಯ ವಿಭಾಗ ಡಿಸಿಪಿ