ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿಕ್ಕಬೊಮ್ಮಸಂದ್ರದ ನಿವಾಸಿ ಗಾಯಿತ್ರಿ (54) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತರ ಪತಿ ಅನಂತು (64)ನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಿಟ್ಟಗಾನಹಳ್ಳಿ ಸಮೀಪದ ನಿರ್ಮಾಣ ಹಂತದ ಬಡಾವಣೆಗೆ ಗಾಯಿತ್ರಿ ಅವರನ್ನು ಕರೆದೊಯ್ದು ಈ ಆರೋಪಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಬೊಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಗಾಯಿತ್ರಿ ಅವರು, ತಮ್ಮ ಪತಿ ಹಾಗೂ ಮಗಳ ಜತೆ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಆಕೆಯ ಪತಿ ಅನಂತು ನಿವೃತ್ತರಾಗಿದ್ದರು. ಪ್ರಸ್ತುತ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದರು. ಖಾಸಗಿ ಕಾಲೇಜಿನಲ್ಲಿ ದಂಪತಿ ಪುತ್ರಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.ಖರ್ಚಿಗೆ ಹಣ ಕೊಡದ್ದಕ್ಕೆ ಕೊಲೆ: ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿತ್ತು. ತನಗೆ ಗೌರವ ಕೊಡುವುದಿಲ್ಲ, ಮನೆಯಲ್ಲಿ ಉಟೋಪಚಾರ ವಿಚಾರದಲ್ಲಿ ಉದಾಸೀನ ಮಾಡುತ್ತಾಳೆ. ಅಲ್ಲದೆ ಖರ್ಚಿಗೆ ಹಣ ಸಹ ಕೊಡುವುದಿಲ್ಲ ಎಂದು ಪತ್ನಿ ಮೇಲೆ ಅನಂತು ಗಲಾಟೆ ಮಾಡುತ್ತಿದ್ದ. ಇದೇ ವಿಷಯಗಳಿಗೆ ಆಗಾಗ್ಗೆ ಮನೆಯಲ್ಲಿ ದಂಪತಿ ಮಧ್ಯೆ ಜಗಳವಾಗುತ್ತಿದ್ದವು. ಈ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರಳಿದ ಅನಂತು, ತನ್ನ ಪತ್ನಿ ಕೊಲೆಗೆ ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹದ ಮೇಲಿನ ಗಾಯದ ಗುರುತುಗಳನ್ನು ಕಂಡು ಖಾಸಗಿ ವೈದ್ಯರಿಗೆ ಅನುಮಾನ ಬಂದಿದೆ. ತಕ್ಷಣವೇ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತೆರಳಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.