ಮಂಡ್ಯ : ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ೨ನೇ ಅಪರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಮಂಡ್ಯದ ಸಬ್ದರಿಯಾ ಮೊಹಲ್ಲಾ ನಿವಾಸಿ ಸೈಯದ್ ರಿಜ್ವಾನ್ ಬಾನು (36) ಹಾಗೂ ಈಕೆಯ ಪ್ರಿಯಕರ ದಾವಣಗೆರೆ ಜಿಲ್ಲೆಯ ಹರಿಹರದ ರೆಹಮತ್ ಉಲ್ಲಾ (28) ಶಿಕ್ಷೆಗೊಳಗಾದವರು. ಸಬ್ದರಿಯಾಮೊಹಲ್ಲಾ ನಿವಾಸಿ, ತಗ್ಗಹಳ್ಳಿ ಸರ್ಕಾರಿ ಕಾಲೇಜಿನ ಉಪ ಪ್ರಾಂಶುಪಾಲ ಅಲ್ತಾಫ್ ಮೆಹದಿ ಎಂಬುವರೇ ಕೊಲೆಯಾದವರು.
ಉಪ ಪ್ರಾಂಶುಪಾಲ ಅಲ್ತಾಫ್ ಮೆಹದಿ ಮತ್ತು ಸೈಯದ್ ರಿಜ್ವಾನ್ ಬಾನು ಅವರು 19 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹರಿಹರದ ರೆಹಮತ್ ಉಲ್ಲಾ ಫೇಸ್‌ಬುಕ್‌ನಲ್ಲಿ ರಿಜ್ವಾನ್ ಬಾನು ಅವರನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ದಿನಗಳಲ್ಲಿ ಮಂಡ್ಯಕ್ಕೆ ಬಂದಿದ್ದ. ಈತನನ್ನು ಪತ್ನಿಯೇ ಪತಿಗೆ ಪರಿಚಯ ಮಾಡಿಕೊಟ್ಟು ಇವರು ಟೈಲ್ಸ್ ವ್ಯಾಪಾರ ಮಾಡುತ್ತಿದ್ದು, ಇವರಿಗೆ ಅಂಗಡಿಯೊಂದನ್ನು ತೋರಿಸುವಂತೆ ಪತಿಗೆ ತಿಳಿಸಿದ್ದಾಳೆ. ನಂತರ ಕೆಲಸಕ್ಕಾಗಿ ತಾನೇ ಅವರ ಅಂಗಡಿಯಲ್ಲಿ ಕೆಲಸ ಮಾಡುವುದಾಗಿ ಪತಿಗೆ ತಿಳಿಸಿ ಅಂಗಡಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ.
ಇವರಿಬ್ಬರ ನಡುವೆ ಅನೈತಿಕ ಸಂಬಂಧ ಉಂಟಾಗಿದೆ. ಇದನ್ನು ಗಮನಿಸಿದ ಉಪ ಪ್ರಾಂಶುಪಾಲ ಅಲ್ತಾಫ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಇಬ್ಬರೂ ಬೇರೆಯಾಗಿ ಅಲ್ತಾಫ್ ಬೇರೊಂದು ಮದುವೆ ಮಾಡಿಕೊಂಡು ದೂರವಾಗಿದ್ದ. ಆದರೂ ಮಕ್ಕಳನ್ನು ನೋಡುವುದಕ್ಕಾಗಿ ಆಗಾಗ್ಗೆ ಬರುತ್ತಿದ್ದನು. ಕಳೆದ ೨೦೨೧ರ ಜೂನ್ ೨೯ರಂದು ಮಕ್ಕಳನ್ನು ನೋಡಲು ಸಬ್ದರಿಯಾಮೊಹಲ್ಲಾದ ಪತ್ನಿ ಮನೆಗೆ ಬಂದು ಅಲ್ಲೇ ರಾತ್ರಿ ಮಲಗಿದ್ದಾನೆ. ಈ ವೇಳೆ ರಿಜ್ವಾನ್ ಬಾನು ತನ್ನ ಪ್ರಿಯಕರ ರೆಹಮತ್ ಉಲ್ಲಾನನ್ನು ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಪತಿ ಅಲ್ತಾಫ್‌ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದರು.
ಈ ಬಗ್ಗೆ ವಿಷಯ ತಿಳಿದ ಪೂರ್ವ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಇಬ್ಬರೂ ಆರೋಪಿಗಳ ವಿರುದ್ಧ ಅಂದಿನ ಸಿಪಿಐ ಸಂತೋಷ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈಯಿದ್ ಉನ್ನಿಸ್ ಅವರು ಆರೋಪಿಗಳ ಅಪರಾಧ ಸಾಬೀತಾದ ಕಾರಣ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ೧ ಲಕ್ಷ ರು. ದಂಡ, ಸಾಕ್ಷ್ಯ ನಾಶಕ್ಕಾಗಿ ೫ ವರ್ಷ ಸಜೆ ಮತ್ತು ೫೦ ಸಾವಿರ ದಂಡ ವಿಸಿ ತೀರ್ಪು ನೀಡಿದ್ದಾರೆ. ಮೃತ ಅಲ್ತಾಫ್ ಮೆಹದಿ ಅವರ ಮೂವರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಪ್ರಾಷಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜು ಅವರು ವಾದ ಮಂಡಿಸಿದ್ದರು.
ಶ್ರೀರಂಗಪಟ್ಟಣ : ಬಸ್ ಹಿಮ್ಮುಖವಾಗಿ ಚಲಿಸಿ ಗುದ್ದಿದ ಪರಿಣಾಮ ಕೇರಳ ಮೂಲದ ಮಹಿಳೆ ಮೃತಪಟ್ಟು, ಮತ್ತೊರ್ವ ಮಹಿಳೆ ಗಾಯಗೊಂಡಿರುವ ಘಟನೆ ತಾಲೂಕಿನ ಕೆಆರ್‌ಎಸ್ ಬೃಂದಾವನದ ಬಸ್ ಪಾರ್ಕಿಂಗ್ ಬಳಿಲ್ಲಿ ನಡೆದಿದೆ.
ಕೇರಳ ಮೂಲದ ಕೊಲ್ಲಂಬಳಿ ಗ್ರಾಮದ ಮಹಿಳೆ ಬೃಂದಾವನ ವೀಕ್ಷಣೆಗಾಗಿ ಆಗಮಿಸಿದ್ದ ವೇಳೆ ಕೌಸಲ್ಯ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆ ಸಹೋದರಿ ನಾರಾಯಣಿ ಗಾಯಗೊಂಡಿದ್ದಾರೆ.
ಕೌಸಲ್ಯ ಹಾಗೂ ನಾರಾಯಣಿ ಈ ಇಬ್ಬರು ಬೃಂದಾವನ ವೀಕ್ಷಣೆ ನಡೆಸಿ ಕೇರಳ ಕೊಪ್ಪಂನಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದು ನಿಂತಿದ್ದ ಬಸ್ ಹಿಂಬದಿ ಕಟ್ಟೆ ಮೇಲೆ ಕುಳಿತು ಊಟ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಚಾಲಕ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಮುಂದು ಹೋಗಲು ಹ್ಯಾಂಡ್ ಬ್ರೇಕ್ ತೆಗೆದು ಚಾಲನೆಗೆ ಮುಂದಾಗುತ್ತಿದ್ದಂತೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಊಟ ಮಾಡುತ್ತಿದ್ದ ಇಬ್ಬರು ಮಹಿಳೆಯ ಮೇಲೆ ಗುದ್ದಿ ತೀವ್ರವಾಗಿ ತಲೆ, ಮುಖ ಹಾಗು ಕಣ್ಣುಗಳಿಗೆ ಗಾಯಗೊಂಡಿದ್ದಾರೆ.
ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ಈ ಇಬ್ಬರು ಮಹಿಳೆಯರನ್ನು ದಾಖಲಿಸಿದ್ದರೂ ಸಹ ಕೌಸಲ್ಯ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ನಾರಾಯಣಿ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕೆಆರ್‌ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರವಾಸಿಗರಿಂದ ಮಾಹಿತಿ ಪಡೆದು ಈ ಸಂಬಂಧ ಪ್ರಕರಣ ದಾಖಲಾಗಿದೆ.