ಕನ್ನಡಪ್ರಭ ವಾರ್ತೆ ಬೆಂಗಳೂರು
ಕುದುರೆ ರೇಸ್‌ನಲ್ಲಿ ಅಕ್ರಮ ಬೆಟ್ಟಿಂಗ್ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿ ಸುಮಾರು ₹3 ಕೋಟಿ ನಗದನ್ನು ಸಿಸಿಬಿ ಜಪ್ತಿ ಮಾಡಿದೆ.ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಬಿಟಿಸಿ ಕ್ಲಬ್ ಮೇಲೆ ಮಧ್ಯಾಹ್ನ 2.30ರ ಸುಮಾರಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಸಾರಥ್ಯದಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿತು. ಸತತ ಆರು ತಾಸಿಗೂ ಅಧಿಕ ಹೊತ್ತು ಬಿಟಿಸಿ ಜಾಲಾಡಿದ ಸಿಸಿಬಿ ತಂಡಗಳು, ಈ ವೇಳೆ ಬೆಟ್ಟಿಂಗ್ ಕೌಂಟರ್‌ನಲ್ಲಿದ್ದ ಅನಧಿಕೃತ ಮೂರು ಕೋಟಿ ರು. ವಶಪಡಿಸಿಕೊಂಡಿವೆ. ಅಲ್ಲದೆ ಸುಮಾರು 60ಕ್ಕೂ ಹೆಚ್ಚಿನ ಜನರನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿವೆ.
ಹಲವು ದಿನಗಳಿಂದ ಬಿಟಿಸಿಯಲ್ಲಿ ಜಿಎಸ್‌ಟಿ ಇಲ್ಲದೆ ಅಕ್ರಮ ಬೆಟ್ಟಿಂಗ್ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿತು. ಹೀಗಾಗಿ ಬಿಟಿಸಿ ಮೇಲೆ ಹಠಾತ್ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಕ್ಲಬ್‌ನ 20 ಕೌಂಟರ್‌ಗಳಲ್ಲಿ ಕುದುರೆ ರೇಸ್‌ಗೆ ಬಾಜಿ ಕಟ್ಟಿದ ಹಣವನ್ನು ಪರಿಶೀಲಿಸಲಾಯಿತು. ಆಗ ಸುಮಾರು 3 ಕೋಟಿ ರು ಅನಧಿಕೃತ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ: 290 ಸಿಲಿಂಡರ್ ಜಪ್ತಿ
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಗರದಲ್ಲಿ ಅಕ್ರಮವಾಗಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿಕೊಂಡು ರೀಫಿಲ್ಲಿಂಗ್ ಮಾಡುತ್ತಿದ್ದ ಎರಡು ಸ್ಥಳಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ಮಾಡಿ ₹33 ಲಕ್ಷ ಮೌಲ್ಯದ 290 ಗ್ಯಾಸ್ ಸಿಲಿಂಡರ್‌ಗಳು ಹಾಗೂ ರೀಫಿಲ್ಲಿಂಗ್‌ಗೆ ಬಳಸುತ್ತಿದ್ದ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಎಂಟರ್ ಪ್ರೈಸಸ್ ಅಂಗಡಿ ಮೇಲಿನ ದಾಳಿ ವೇಳೆ 140 ದೊಡ್ಡ ಸಿಲಿಂಡರ್‌ಗಳು 30 ಸಣ್ಣ ಸಿಲಿಂಡರ್‌ಗಳು ಸೇರಿದಂತೆ ಒಟ್ಟು 170 ಗ್ಯಾಸ್ ಸಿಲಿಂಡರ್‌ಗಳು, 5 ರೀಫಿಲ್ಲಿಂಗ್ ರಾಡ್‌ಗಳು, 200 ಸೀಲ್ ಲೇಬಲ್‌ಗಳು, 3 ರೆಗ್ಯುಲೇಟರ್‌ಗಳು ಮತ್ತು 3 ಗೂಡ್ಸ್ ಕ್ಯಾಂಟರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ.ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಯ್ಯ ರೆಡ್ಡಿ ಲೇಔಟ್ ಮನೆಯೊಂದರ ಮೇಲಿನ ದಾಳಿ ವೇಳೆ 120 ಗ್ಯಾಸ್ ಸಿಲಿಂಡರ್‌ಗಳು, 5 ರೀಫಿಲ್ಲಿಂಗ್ ರಾಡ್‌ಗಳು, 100 ಸೀಲ್ ಲೇಬಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಈ ಎರಡೂ ಪ್ರಕರಣಗಳಲ್ಲಿ ಪರವಾನಗಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಅಂತೆಯೆ ಬೇರೆ ಸಿಲಿಂಡರ್‌ಗಳಿಗೆ ಅಧಿಕೃತ ಕಂಪನಿಗಳ ಲೇಬಲ್ ಅಂಟಿಸಿ ಕಂಪನಿ ಸಿಲಿಂಡರ್‌ಗಳೆಂದು ನಂಬಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವುದು ಬೆಳಕಿಗೆ ಬಂದಿದೆ.ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಮತ್ತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಶೂ ಮಾರುತ್ತಿದ್ದ 2 ಅಂಗಡಿ ಜಪ್ತಿ
ಬೆಂಗಳೂರು: ಕಳಪೆ ಗುಣಮಟ್ಟದ(ನಕಲಿ) ಟೀ ಶರ್ಟ್, ಶೂ, ಬೆಲ್ಟ್ ದಾಸ್ತಾನು ಮಾಡಿಕೊಂಡು ಪ್ರತಿಷ್ಠಿತ ಕಂಪನಿಯ ವಸ್ತುಗಳೆಂದು ನಂಬಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಅಂಗಡಿಗಳ ಮೇಲೆ ದಾಳಿ ಮಾಡಿರುವ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು, 23.90 ಲಕ್ಷ ರು. ಮೌಲ್ಯದ ನಕಲಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ರಸ್ತೆಯ ಸ್ಯಾಂಚೂರಿ ಮತ್ತು ಮೈನ್ ಗಾರ್ಡ್ ರೋಡ್ ಕ್ರಾಸ್‌ನ ಶ್ರೀ ಸಾಯಿ ಕಲೆಕ್ಷನ್ ಅಂಗಡಿಗಳಲ್ಲಿ ನಕಲಿ ಶೂ, ಟೀ ಶರ್ಟ್, ಬೆಲ್ಟ್ ದಾಸ್ತಾನು ಮಾಡಿಕೊಂಡು ಇವು ಪ್ರತಿಷ್ಠಿತ ಲೂಯಿಸ್ ಬೆಟಾನ್ ಕಂಪನಿಯ ವಸ್ತುಗಳು ಎಂದು ನಂಬಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ಎರಡೂ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾಪಿ ರೈಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.