ಕನ್ನಡಪ್ರಭ ವಾರ್ತೆ ಬೆಂಗಳೂರು
ಜ.4ರಂದು ಪೆಂಟಿಂಗ್ ಗುತ್ತಿಗೆದಾರ ಪ್ರದ್ಯುಮ್ನ ಎಂಬುವರ ಪತ್ನಿ ನೀಲಂ ಅವರನ್ನು ಕೊಲೆ ಮಾಡಲಾಗಿತ್ತು. ಮನೆಗೆ ಬಂದು ಹಸಿವು ಎಂದ ಹಂತಕನಿಗೆ ಅನ್ನವಿಕ್ಕಲು ಹೋದ ವೇಳೆ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಆರೋಪಿ ದೊಡ್ಡ ನಾಗಮಂಗಲದ ನಿವಾಸಿ ರಜನೀಶ್ ಕುಮಾರ್‌ನಿಂದ ದೋಚಿದ್ದ ಚಿನ್ನದ ಓಲೆಗಳು ಹಾಗೂ ಹಣ ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆಗಿಳಿದ ಇನ್‌ಸ್ಪೆಕ್ಟರ್ ಜಿ.ಆರ್.ನವೀನ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹಂತಕನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೋಟಿ ಕನಸು ನಿರೀಕ್ಷಿದವನಿಗೆ ಸಿಕ್ಕಿದ್ದು ಪುಡಿಗಾಸು:
ವರ್ಷದ ಹಿಂದೆ ನೀಲಂ ಸೋದರನ ಅಂಗಡಿ ಮುಂದಿನ ಕಟ್ಟಡದಲ್ಲಿ ಪೆಂಟಿಂಗ್ ಕೆಲಸ ಮಾಡುವಾಗ ಅವರಿಗೆ ರಜನೀಶ್ ಪರಿಚಯವಾಗಿತ್ತು. ಬಳಿಕ ಒಂದೇ ರಾಜ್ಯದವರಾಗಿದ್ದರಿಂದ ನೀಲಂ ಸೋದರ ಹಾಗೂ ರಜನೀಶ್ ಮಧ್ಯೆ ಆತ್ಮೀಯ ಸ್ನೇಹ ಬೆಳೆಯಿತು. ಆಗಾಗ್ಗೆ ನೀಲಂ ಸೋದರನ ಅಂಗಡಿ ವ್ಯಾಪಾರ ವಹಿವಾಟಿಗೆ ಆರೋಪಿ ನೆರವಾಗುತ್ತಿದ್ದ. ಇದೇ ಗೆಳೆತನದಲ್ಲಿ ಮನೆಗೆ ಹೋಗಿ ಬಂದು ಮಾಡುತ್ತಿದ್ದರಿಂದ ನೀಲಂ ಅವರಿಗೆ ರಜನೀಶ್ ಪರಿಚಯವಿತ್ತು.
ಜ.4ರಂದು ನೀಲಂ ಅವರು ಮನೆಯಲ್ಲೇ ಒಬ್ಬರೇ ಇದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ರಜನೀಶ್ ತೆರಳಿದ್ದ. ಆಗ ತನಗೆ ಹಸಿವಾಗುತ್ತಿದೆ ಎಂದಾಗ ಊಟ ಬಡಿಸಲು ಅಡುಗೆ ಮನೆಗೆ ತೆರಳುತ್ತಿದ್ದ ನೀಲಂ ಅವರನ್ನು ಹಿಂಬಾಲಿಸಿದ ರಜನೀಶ್, ಆಕೆಯ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಹತ್ಯೆ ಬಳಿಕ ಮನೆಯೊಳಗೆ ಜಾಲಾಡಿದರೂ ಆತನಿಗೆ ಬಿಡಿಗಾಸು ಸಿಕ್ಕಿಲ್ಲ. ಕೊನೆಗೆ ಹುಂಡಿಯನ್ನು ಒಡೆದು ಅದರಲ್ಲಿದ್ದ ₹8 ಸಾವಿರ ಹಾಗೂ ಮೃತ ನೀಲಂ ಧರಿಸಿದ್ದ ಎರಡು ಚಿನ್ನದ ಓಲೆಗಳನ್ನು ದೋಚಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗುರುತು ಮರೆ ಮಾಚಲು ಟೀ ಶರ್ಟ್ ಬದಲಿಸಿದಹತ್ಯೆ ಬಳಿಕ ತನಗೆ ಗುರುತು ಸಿಗದೆ ಮರೆ ಮಾಚಲು ನೀಲಂ ಅವರ ಮನೆಗೆ ಬರುವಾಗ ಟಿ ಶರ್ಟ್ ಮೇಲೆ ಶರ್ಟ್ ಧರಿಸಿ ಹಾಗೂ ಮುಖ ಕಾಣದಂತೆ ಟವರ್ ಸುತ್ತಿಕೊಂಡು ಬಂದಿದ್ದ. ಅಲ್ಲದೆ ಮೊಬೈಲ್ ಅನ್ನು ತನ್ನ ಮನೆಯಲ್ಲೇ ಇಟ್ಟು ಬಂದಿದ್ದ. ಕೊಲೆ ಮಾಡಿದ ಬಳಿಕ ಮೃತರ ಮನೆಯಿಂದ 500 ಮೀ ದೂರ ಹೋದ ಬಳಿಕ ಶರ್ಟ್ ಬದಲಿಸಿ ಆತ ಪರಾರಿಯಾಗಿದ್ದ. ಆದರೆ ಆತ ಪ್ಯಾಂಟ್ ಮತ್ತು ಚಪ್ಪಲಿ ಬದಲಿಸಿರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿದಾಗ ಟೀ ಶರ್ಟ್ ಹಾಗೂ ಶರ್ಟ್ ಧರಿಸಿದ್ದ ವ್ಯಕ್ತಿ ಚಲನವಲನದ ಮೇಲೆ ಶಂಕೆ ಮೂಡಿತ್ತು. ಈ ಸುಳಿವು ಆಧರಿಸಿ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ತಪಾಸಣೆ ನಡೆಸಿದಾಗ ಅಂತಿಮವಾಗಿ ಹಂತಕನ ಜಾಡು ಸಿಕ್ಕಿತು ಎಂದು ಮೂಲಗಳು ಹೇಳಿವೆ.