ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ನಡೆಸಿದ ದಾಳಿ ವೇಳೆ ಅತ್ಯಾಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕೊಠಡಿಯಲ್ಲಿ (ಸೆಲ್) ಮೊಬೈಲ್ ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿವೆ.
ಜಪ್ತಿಯಾದ ಪೆನ್‌ಡ್ರೈವ್‌ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳು ಮತ್ತು ಅವರ ಕೋಣೆಯಲ್ಲಿದ್ದ ಹಾಸಿಗೆ ಕೆಳಗೆ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಗಳ ಅರೆನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಎರಡು ವರ್ಷಗಳು ಉರುಳಿದರೂ ಪ್ರಜ್ವಲ್ ಬದಲಾಗಿಲ್ಲ ಎಂಬುದನ್ನು ಇದು ತೋರಿಸುತ್ತಿದೆ.
ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಾಗೆಯೇ ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಪ್ರಜ್ವಲ್ ಅವರನ್ನು ಕಾರಾಗೃಹ ಅಧಿಕಾರಿಗಳು ಎತ್ತಂಗಡಿ ಮಾಡಿದ್ದಾರೆ.
ಪ್ರಜ್ವಲ್ ಅವರ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳು ಡೌನ್‌ಲೋಡ್ ಆಗಿರುವುದು ಪತ್ತೆಯಾಗಿದೆ. ಜೈಲಿನಲ್ಲಿದ್ದ ಟಿವಿಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಿ ಚಲನಚಿತ್ರ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಕ್ರಮ ಚಟುವಟಿಕೆಗಳ ಶಂಕೆಯ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದರು. ಆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ಇರುವ ಸೆಲ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್, ಮೊಬೈಲ್ ಚಾರ್ಜ್ ಹಾಗೂ ನೋಟ್ ಬುಕ್ ಸಿಕ್ಕಿದೆ. ಈ ಸಂಬಂಧ ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್ ಎಂ.ಎಲ್.ಸುಬ್ರಹ್ಮಣ್ಯ ನೀಡಿದ ದೂರಿನ ಮೇರೆಗೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಮ್ಮ ಮನೆ ಕೆಲಸದಾಳು ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಪ್ರಜ್ವಲ್ ಶಿಕ್ಷೆ ಅನುಭವಿಸುತ್ತಿದ್ದಾರೆ. ಅದೇ ಸೆಲ್‌ನಲ್ಲಿ ಪೋಕ್ಸೋ ಪ್ರಕರಣದ ಮತ್ತೊಬ್ಬ ಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ಇದ್ದಾನೆ.
ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್:
ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ)ರ ಆದೇಶದ ಮೇರೆಗೆ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಬಳಸುತ್ತಿದ್ದ ಮೊಬೈಲ್, ಡ್ರಗ್ಸ್ ಹಾಗೂ ಇತರೆ ನಿಷೇಧಿತ ವಸ್ತುಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು. ಆಗ ಕಾರಾಗೃಹದ ಬಿಗಿ ಭದ್ರತಾ (ಹೈ-ಸೆಕ್ಯೂರಿಟಿ) ಬ್ಯಾರಕ್‌ಗಳನ್ನು ಶೋಧಿಸಲಾಯಿತು. ಆ ವಿಭಾಗದ ಮೊದಲ ಮಹಡಿಯ 1ರಿಂದ 3ನೇ ನಂಬರ್ ಸೆಲ್‌ಗಳನ್ನು ತಪಾಸಣೆ ನಡೆಸಲಾಯಿತು.
ಆಗ ಸೆಲ್ 4ರಲ್ಲಿ ಒಂದು ತಿಳಿ ನೀಲಿ ಬಣ್ಣದ ರೆಡ್‌ಮಿ 5ಜಿ ಐಎಂಇಐ ನಂ-860894070725085/860894070725093, ಮೊಬೈಲ್ ನಂ-7995011547, ಬಿಳಿ ಬಣ್ಣದ ಚಾರ್ಜರ್, ಒಂದು ನೀಲಿ ಬಣ್ಣದ ಪಾಕೆಟ್ ನೋಟ್ ಪುಸ್ತಕ ಮತ್ತು ಒಂದು ಕಪ್ಪು ಬಣ್ಣದ ಸ್ಯಾನ್ ಡಿಸ್ಕ್ ಪೆನ್‌ಡ್ರೈವ್ ಸಿಕ್ಕಿದ್ದವು. ಆ ಸೆಲ್‌ನಲ್ಲಿದ್ದ ಕೈದಿಗಳಾದ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ಇದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪ್ರಜ್ವಲ್ ಅವರು ನೋಟ್ ಪುಸ್ತಕ ತಮ್ಮದೆಂದು ತಿಳಿಸಿದರು. ಮೊಬೈಲ್, ಚಾರ್ಜರ್ ಮತ್ತು ಪೆನ್‌ಡ್ರೈವ್ ನನ್ನವು ಎಂದು ಪ್ರತಾಪ್ ಹೇಳಿಕೆ ನೀಡಿದ. ಆದರೆ ತಾನು ಆಗಾಗ್ಗೆ ಸಂಬಂಧಿಕರು ಹಾಗೂ ವಕೀಲರಿಗೆ ಕರೆ ಮಾಡಲು ಪ್ರತಾಪ್‌ನ ಮೊಬೈಲ್ ಅನ್ನು ಬಳಸಿದ್ದಾಗಿ ಪ್ರಜ್ವಲ್ ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಫೇಸ್‌ಬುಕ್, ವಾಟ್ಸಾಪ್ ಚಾಟಿಂಗ್: ಜೈಲಿನಲ್ಲೂ ಒಟಿಟಿಗಳ ವೀಕ್ಷಣೆ
ಪ್ರಜ್ವಲ್ ಅವರ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮುಂತಾದ ಅಪ್ಲಿಕೇಷನ್‌ಗಳನ್ನು ಡೌನ್ ಲೋಡ್ ಆಗಿರುವುದು ಪತ್ತೆಯಾಗಿದೆ. ಆದರೆ ಅವುಗಳ ಪಾಸ್‌ವರ್ಡ್ ಪ್ರೊಟೆಕ್ಟ್ ಆಗಿವೆ. ಪಾಸ್‌ವರ್ಡ್ ಕೇಳಿದಾಗ ಆ ಇಬ್ಬರು ಕೈದಿಗಳು ತಮಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
ಪೆನ್‌ಡ್ರೈವ್-ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ
ಇನ್ನು ಸೆಲ್‌ನಲ್ಲಿ ಸಿಕ್ಕಿದ ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳಿದ್ದವು ಎಂದು ತಿಳಿದು ಬಂದಿದೆ. ಜೈಲಿನ ಟಿವಿಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಿ ಸಿನಿಮಾ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಆ ಪೆನ್ ಡ್ರೈವ್‌ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿದ್ದವು. ಅದೇ ರೀತಿ ಮೊಬೈಲ್ ನಲ್ಲಿ ‘ಜಿಂಗ್ರಾ’ ಹೆಸರಿನ ಗೇಮಿಂಗ್ ಆ್ಯಪ್‌ನಲ್ಲಿ ಕೆಲ ಅಶ್ಲೀಲ ವಿಡಿಯೋಗಳು ಡೌನ್ ಲೋಡ್ ಆಗಿದ್ದವು. ಹಾಸಿಗೆ ಕೆಳಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಯರು ಒಳ ಉಡುಪು ಧರಿಸಿ ತೆಗೆಸಿದ್ದ ಚಿತ್ರಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.
ಸಾಮಾನ್ಯ ಸೆಲ್‌ಗೆ ಶಿಫ್ಟ್
ಇದುವರೆಗೆ ವಿಐಪಿ ಬ್ಯಾರಕ್‌ನಲ್ಲಿ ‘ಬಿಂದಾಸ್’ ಬದುಕು ಸವೆಸುತ್ತಿದ್ದ ಪ್ರಜ್ವಲ್ ಅವರೀಗ ಸಾಮಾನ್ಯ ಸೆಲ್‌ಗೆ ಎತ್ತಂಗಡಿಗೊಂಡಿದ್ದಾರೆ. ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಅವರನ್ನು ಕೂಡಲೇ ಸಜಾ ಕೈದಿಗಳ ಬ್ಯಾರಕ್‌ಗೆ ಕಾರಾಗೃಹ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಈ ಬ್ಯಾರಕ್‌ನಲ್ಲಿ ಪ್ರಜ್ವಲ್ ಅವರೊಂದಿಗೆ 60 ವರ್ಷ ದಾಟಿದ ಸುಮಾರು 20 ಕೈದಿಗಳಿದ್ದಾರೆ ಎಂದು ಮೂಲಗಳು ಹೇಳಿವೆ.
ದಾಳಿ ಮಾಡ್ಸಿದ್ದು ನಾನೇ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತವಾಗಿ ದಾಳಿ ಮಾಡಿಲ್ಲ. ಕೆಲ ದಿನಗಳ ಹಿಂದೆ ನಾನು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಲೋಪಗಳು ಕಂಡುಬಂದಿದ್ದವು. ಹೀಗಾಗಿ ಮುಖ್ಯಮಂತ್ರಿ ಅವರ ಅನುಮತಿ ಪಡೆದು ನಾನೇ ಹೇಳಿ ಸಿಸಿಬಿ ಪೊಲೀಸರಿಂದ ದಾಳಿ ಮಾಡಿಸಿದೆ.
ಪ್ರಿಯಾಂಕ್ ಖರ್ಗೆ, ಗೃಹ ಸಚಿವ
ಅತ್ಯಾಚಾರ ಪ್ರಕರಣದಲ್ಲಿ 2 ವರ್ಷದ ಹಿಂದೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಮಂಗಳವಾರ ಜೈಲಿನ ಮೇಲೆ ದಾಳಿ ಸಿಸಿಬಿ ಅಧಿಕಾರಿಗಳ ದಾಳಿ
ಈ ವೇಳೆ ಪ್ರಜ್ವಲ್ ಕೊಠಡಿಯಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ. ಮೊಬೈಲ್‌ನಲ್ಲಿ ಒಟಿಟಿ ಡೌನ್‌ಲೋಡ್ ಮಾಡಿದ್ದು ದೃಢ
ಪೆನ್‌ಡ್ರೈವ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನಟಿಯರು, ರೂಪದರ್ಶಿಯರ ಅರೆನಗ್ನ, ಫೋಟೋ, ವಿಡಿಯೋಗಳು ಪತ್ತೆ
