ಬೆಂಗಳೂರು : ಸ್ಟಾರ್ ಹೋಟೆಲ್‌ಗಳ ಮೇಲಿನ ದಾಳಿ ಬೆನ್ನಲ್ಲೇ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬುಧವಾರ ವಿಧಾನಸೌಧ, ವಿಕಾಸ ಸೌಧ, ಆರೋಗ್ಯ ಸೌಧ, ಶಾಸಕರ ಭವನ, ಬಹು ಮಹಡಿ ಕಟ್ಟಡದ (ಎಂಎಸ್ ಬಿಲ್ಡಿಂಗ್) ಆವರಣದಲ್ಲಿನ ಕ್ಯಾಂಟೀನ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸರ್ಕಾರದ ಆಡಳಿತ ಶಕ್ತಿ ಕೇಂದ್ರ ಹಾಗೂ ಸುತ್ತಮುತ್ತಲಿನ ಸರ್ಕಾರಿ ಕಟ್ಟಡಗಳಲ್ಲಿನ ಕ್ಯಾಂಟೀನ್‌ಗಳಲ್ಲೇ ನೈರ್ಮಲ್ಯದ ಕೊರತೆ, ಜಿರಳೆ, ಅವಧಿ ಮೀರಿದ ಆಹಾರ ಪದಾರ್ಥ ಪತ್ತೆಯಾಗಿದೆ. ಇನ್ನು ಆರೋಗ್ಯ ಸೌಧದ ಕ್ಯಾಂಟೀನ್‌ನಲ್ಲೇ ಅವಧಿ ಮೀರಿದ ಆಹಾರ ಕಣ್ಣಿಗೆ ಬಿದ್ದಿದೆ.
ಕಳೆದ 1 ವಾರದಿಂದ ಸ್ಟಾರ್ ಹೋಟೆಲ್, ಆನ್ಲೈನ್ ಪೋರ್ಟಲ್‌ಗಳ ದಾಸ್ತಾನು ಮಳಿಗೆ, ಇಂದಿರಾ ಕ್ಯಾಂಟೀನ್ ಮೇಲೆ ದಾಳಿ ನಡೆಸಲಾಗಿತ್ತು. ಬುಧವಾರ ಸರ್ಕಾರಿ ಕಟ್ಟಡಗಳಲ್ಲಿನ ಕ್ಯಾಂಟೀನ್‌ಗಳ ಪರಿಶೀಲನೆ ನಡೆಸಿದ್ದು, ಆಹಾರ ತಯಾರಿಕೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಎಂಎಸ್ ಬಿಲ್ಡಿಂಗ್ ಆವರಣದ ಹೋಟೆಲ್‌ಗೆ ಬೀಗ ಹಾಕಲಾಗಿದೆ. ಉಳಿದಂತೆ ಇತರೆ ಕ್ಯಾಂಟೀನ್‌ಗಳಿಗೆ ನೋಟಿಸ್ ನೀಡಿ, ನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯಸೌಧದಲ್ಲೇ ಅವಧಿ ಮೀರಿದ ಆಹಾರ:
ಆರೋಗ್ಯ ಸೌಧದ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡದಿರುವುದು ಕಂಡು ಬಂದಿದ್ದು, ಅವಧಿ ಮುಗಿದ ಇಡ್ಲಿ ರವಾ, ಕೋಕೋನಟ್ ಪೌಡರ್ ಪತ್ತೆಯಾಗಿದೆ. ಆಹಾರ ಪದಾರ್ಥಗಳ ಸಂಗ್ರಹಣೆಯಲ್ಲಿ ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿ ಪಾಲಿಸದಿರುವುದು, ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಕಂಡು ಬಂದಿದೆ. 500 ಗ್ರಾಂ ಸೂಜಿ ರವಾ ಮತ್ತು 500 ಗ್ರಾಂ ಕೋಕೋನಟ್ ಪೌಡರ್ ಜಪ್ತಿ ಮಾಡಲಾಗಿದೆ.
ನಂದಿನಿ ಪಾರ್ಲರ್‌ಗೆ ನೋಟಿಸ್:
ನಂದಿನಿ ಪಾರ್ಲರ್‌ಗೆ ಭೇಟಿ ನೀಡಿದಾಗ ಲೇಬಲಿಂಗ್‌ಗೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿದ್ದು, ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಎಂಎಸ್ ಬಿಲ್ಡಿಂಗ್‌ನ ಆವರಣದಲ್ಲಿನ ಹೋಟೆಲ್‌ಗೆ ಅನೈರ್ಮಲ್ಯಕ್ಕೆ ಸಂಬಂಧಿಸಿದ ಲೋಪಗಳನ್ನು ಸರಿಪಡಿಸಿಕೊಂಡ ಬಳಿಕವಷ್ಟೇ ಅನುಮತಿ ಪಡೆದು ಹೋಟೆಲ್ ಪುನರಾರಂಭಿಸುವುದಾಗಿ ಮುಚ್ಚಳಿಕೆ ಪಡೆಯಲಾಗಿದೆ.ಆಹಾರ ಉದ್ದಿಮೆದಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಸಂಬಂಧಿತ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಆಹಾರದ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ, ಸೂಕ್ತ ಸಂಗ್ರಹಣೆ, ಲೇಬಲಿಂಗ್ ಮತ್ತು ಆಹಾರ ನಿರ್ವಹಣಾ ಕ್ರಮಗಳಲ್ಲಿ ಯಾವುದೇ ರೀತಿಯ ಉಲ್ಲಂಘನೆ ಕಂಡು ಬಂದಲ್ಲಿ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಇಲಾಖೆ ಎಚ್ಚರಿಕೆ ನೀಡಿದೆ.
ಕಾಕ್ರೋಚ್ ಕಾಟ!:
ಶಾಸಕರ ಭವನದಲ್ಲಿನ ಮಲ್ಲಿಗೆ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡದಿರುವುದು ಕಂಡು ಬಂದಿದೆ. ವಿಶೇಷ ಎಂದರೆ ಶಾಸಕರ ಭವನದ ಕ್ಯಾಂಟೀನ್‌ನಲ್ಲೂ ಜಿರಳೆಗಳು ಕಂಡು ಬಂದಿದ್ದು, ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಪತ್ತೆಯಾಗಿದೆ.
ಜೋಮ್ಯಾಟೋ ಹೈಫರ್‌ಪ್ಯೂರ್‌ನಿಂದ ಸ್ಟಾರ್ ಹೋಟೆಲ್‌ಗೆ ಕೊಳೆತ ಮಾಂಸ!
ಜೋಮ್ಯಾಟೋ ಹೈಫರ್‌ಪ್ಯೂರ್ ಘಟಕದ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಹಾರ ಉತ್ಪನ್ನಗಳ ಪರಿಶೀಲನೆ ನಡೆಸಿದ ವೇಳೆ ಲೋಪದೋಷಗಳು ಕಂಡು ಬಂದಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಸ್ಟಾರ್ ಹೋಟೆಲ್‌ಗಳ ಪರಿಶೀಲನೆ ವೇಳೆ ಮಾಂಸ ಮತ್ತು ಮೀನನ್ನು ನಗರದ ಜೊಮ್ಯಾಟೋ ಹೈಫರ್‌ಪ್ಯೂರ್ ಘಟಕದಿಂದ ಸರಬರಾಜು ಆಗಿರುವುದು ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಈ ಘಟಕದ ಮೇಲೆ ಆಹಾರ ಸುರಕ್ಷತೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಪರಿಶೀಲನೆ ವೇಳೆ 146 ಕೆ.ಜಿ. ಚಿಕನ್ ಸೇರಿದಂತೆ ಹಲವು ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಳ ಮೇಲೆ ಎಫ್‌ಎಸ್‌ಎಸ್‌ಎಐ ಪರವಾನಗಿ ಲೇಬಲ್ ಇಲ್ಲದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 40 ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಘಟಕಕ್ಕೆ ನೋಟಿಸ್ ಜಾರಿಗೊಳಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.