ಕನ್ನಡಪ್ರಭ ವಾರ್ತೆ ಬೆಂಗಳೂರು
ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ 62 ಅಬಕಾರಿ ಕಚೇರಿಗಳ ಮೇಲೆ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ಬಿ.ವೀರಪ್ಪ ಅವರು ಯಶವಂತಪುರ, ಬ್ಯಾಟರಾಯನಪುರ ಅಬಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿ ನಡೆಸಲಾದ ಅಬಕಾರಿ ಕಚೇರಿಗಳ ಪೈಕಿ ಬಹುತೇಕ ಕಚೇರಿಗಳಲ್ಲಿ ಹಲವು ಲೋಪದೋಷಗಳು ಕಂಡು ಬಂದಿವೆ.
ಲೋಕಾಯುಕ್ತರು ಭೇಟಿ ನೀಡಿದ ಕಚೇರಿಯಲ್ಲಿ ಯಾವುದೇ ಸೀಲ್ ಹಾಕಿರದ ಸುಮಾರು ಅರ್ಧ ಕೇಜಿಯಷ್ಟು ಅನಧಿಕೃತ ಗಾಂಜಾ, ಮದ್ಯದ ಬಾಟಲಿಗಳು ಹಾಗೂ ದಾಖಲೆ ಇಲ್ಲದ ಎರಡು ಲಕ್ಷ ರು. ನಗದು ಪತ್ತೆಯಾಗಿದೆ. ಇದನ್ನು ಕಂಡ ಲೋಕಾಯುಕ್ತರೇ ದಂಗಾಗಿದ್ದು, ಸಮರ್ಪಕ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಸೂಕ್ತ ಸ್ಪಷ್ಟನೆ ನೀಡದಿದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಎನ್‌ಡಿಪಿಎಸ್ ಪ್ರಕರಣದಲ್ಲಿ ಅಬಕಾರಿ ಇಲಾಖೆಯವರಿಗೆ ಗಾಂಜಾ ಜಪ್ತಿ ಮಾಡಲು ಅವಕಾಶ ಇದೆ. ಜಪ್ತಿ ಮಾಡಿದ ಗಾಂಜಾವನ್ನು ಸೀಲ್ ಮಾಡಬೇಕು. ನ್ಯಾಯಾಲಯಕ್ಕೆ ಹಾಜರುಪಡಿಸಿರುವ ದಾಖಲೆಗಳು ಇರಬೇಕು ಸೇರಿದಂತೆ ಹಲವು ನಿಯಮಗಳಿವೆ. ಆದರೆ, ಅಧಿಕಾರಿಗಳು ನಿಯಮ ಉಲ್ಲಂಘಿಸಿ ಮಾದಕ ವಸ್ತುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಅಬಕಾರಿ ಇಲಾಖೆಯ ಕಚೇರಿಗಳಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ 132 ಪ್ರಕರಣಗಳು ವಿವಿಧ ಹಂತದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ.132 ಪ್ರಕರಣ ದಾಖಲು: ನ್ಯಾ.ಪಾಟೀಲ್
ಕೆಲವೆಡೆ ಅಕ್ರಮ ಮದ್ಯಗಳು ಪತ್ತೆಯಾಗಿವೆ. ಅಬಕಾರಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಗೊತ್ತಾಗಿದೆ. ನಗದು ಪತ್ತೆಯಾಗಿದ್ದು, ಅದರ ದಾಖಲೆಗಳನ್ನು ಕೇಳಲಾಗಿದೆ. ಅಕ್ರಮ ಕುರಿತು ತನಿಖೆ ಮುಂದುವರಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.