ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕಿನ ತೂಬಿನಕೆರೆ ಸಮೀಪ ಹದಿನೈದು ವರ್ಷಗಳ ಹಿಂದೆ ರಚನೆಯಾಗಿದ್ದ ವೇದಿಕ್ ನಗರ ಬಡಾವಣೆಯಲ್ಲಿ ೫.೪೯ ಎಕರೆ ಜಮೀನನ್ನು ನಕಲಿ ಮೂಲ ಖಾತೆದಾರರನ್ನು ಸೃಷ್ಟಿಸಿ ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪಶ್ಚಿಮ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.ನೀಲನಕೊಪ್ಪಲು ನಾಗರಾಜು ಹಾಗೂ ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿಯ ಎ.ಎಚ್.ಮನು ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಮಂಡ್ಯ ಉಪ ನೋಂದಣಾಧಿಕಾರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಮೂಲ ಖಾತೆದಾರರ ಹೆಸರಿನಲ್ಲಿ ನಕಲಿ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದ ರಾಮಯ್ಯ, ಭಾಗ್ಯಮ್ಮ ಎಂಬುವರು ಪ್ರಕರಣದ ಆರೋಪಿಗಳಾಗಿದ್ದರೂ ವೃದ್ಧರಾಗಿರುವುದರಿಂದ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ವೆಂಡರ್‌ಗಳಾದ ವಿಶ್ವನಾಥ್, ವಿಷ್ಣುಮೂರ್ತಿ, ದಾಖಲೆಗಳನ್ನು ಸೃಷ್ಟಿಸಿದ ಆರೋಪಕ್ಕೆ ಗುರಿಯಾಗಿರುವ ಶಂಕರ್ ಅವರನ್ನೂ ಶ್ರೀರಂಗಪಟ್ಟಣ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಶ್ರೀರಂಗಪಟ್ಟಣದ ಶಂಕರ್ ಭಂಡಾರ ಸೈಬರ್ ಕೇಂದ್ರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿದ್ದರಿಂದ ಕಂಪ್ಯೂಟರ್ ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.ನಕಲಿ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದವರು ವೃದ್ಧರಾಗಿದ್ದು, ಈ ವಿಷಯ ನಮಗೇನೂ ಗೊತ್ತಿಲ್ಲ. ಅವರು ಕೇಳಿದ ಕಡೆ ಸಹಿ ಹಾಕಿದ್ದೇವಷ್ಟೇ. ಜಮೀನು ವಾಪಸ್ ಕೊಡುತ್ತೇವೆ. ನಮ್ಮ ವಿರುದ್ಧ ಕೇಸು ದಾಖಲಿಸದಂತೆ ಮನವಿ ಮಾಡಿದ್ದಾರೆಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿದಾರರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.ಕನ್ನಡಪ್ರಭ ವರದಿ ಫಲಶ್ರುತಿ
ಮಂಡ್ಯ ತಾಲೂಕಿನ ತೂಬಿನಕೆರೆ ಸಮೀಪದ ವೇದಿಕ್ ನಗರ ಬಡಾವಣೆಯಲ್ಲಿ ೫.೪೯ ಎಕರೆ ಜಮೀನನ್ನು ನಕಲಿ ಮೂಲ ಖಾತೆದಾರರನ್ನು ಸೃಷ್ಟಿಸಿ ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿರುವ ಪ್ರಕರಣ ಕುರಿತು ಕನ್ನಡಪ್ರಭ ಜೂ.೨೭ರಂದು ಸಮಗ್ರ ವರದಿ ಮಾಡಿತ್ತು.ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಬಳಸಿ ಸತ್ತವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸತ್ತವರ ಕುಟುಂಬದವರಿಗೆ ಬೇರೊಂದು ಕುಟುಂಬದವರನ್ನು ಸೇರಿಸಿ ಸಾಮಾನ್ಯ ಅಧಿಕಾರ ಪತ್ರ ರಚಿಸಿಕೊಂಡು ಕೆಲವು ಆಸ್ತಿಗಳನ್ನು ಅಕ್ರಮವಾಗಿ ಖಾತೆ ಮಾಡಿರುವುದು ಕಂಡುಬಂದಿತ್ತು.
ಮಂಡ್ಯ ತಾಲೂಕು ರಾಗಿಮುದ್ದನಹಳ್ಳಿ, ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಸುಮಾರು ೫.೪೯ ಎಕರೆ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ್ದರು. ಈ ಸಂಬಂಧ ಮೂಲ ಖಾತೆದಾರರಾದ ಎಂ.ಮಾದಯ್ಯ ಅವರ ಪುತ್ರ ಮಂಡ್ಯದ ನೆಹರು ನಗರವಾಸಿ ಡಾ.ಸತೀಶ್‌ಕುಮಾರ್ ಅವರು ತಂದೆಯವರ ಹೆಸರಿನಲ್ಲಿ ಖಾತೆಯಿದ್ದ ಜಮೀನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು.