ವಿದೇಶಗಳಿಗೆ ಅಕ್ರಮವಾಗಿ ಸಿಮ್‌ಕಾರ್ಡ್‌ ಸಾಗಣೆ: ಸೆರೆ

KannadaprabhaNewsNetwork |  
Published : May 20, 2024, 01:33 AM ISTUpdated : May 20, 2024, 05:01 AM IST
KIA Airport | Kannada Prabha

ಸಾರಾಂಶ

ಲಗೇಜ್‌ ಬ್ಯಾಗ್‌ನಲ್ಲಿ ಸಿಮ್‌ ಕಾರ್ಡ್‌ಗಳನ್ನು ಬಚ್ಚಿಟ್ಟು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುವ ವೇಳೆ ಸಿಕ್ಕಿಬಿದ್ದಿರುವುದು.

 ಬೆಂಗಳೂರು :  ಲಗೇಜ್‌ ಬ್ಯಾಗ್‌ನಲ್ಲಿ ಸಿಮ್‌ ಕಾರ್ಡ್‌ಗಳನ್ನು ಬಚ್ಚಿಟ್ಟು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ನಿವಾಸಿ ನಾ.ರಾ.ಶ್ರೀನಿವಾಸ ರಾವ್‌ (55) ಬಂಧಿತ. ಈತನಿಂದ ಜಿಯೋ, ಏರ್‌ಟೆಲ್‌ ಸೇರಿದಂತೆ ವಿವಿಧ ಕಂಪನಿಗಳ 24 ಸಿಮ್‌ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಅಂತಾರಾಷ್ಟ್ರೀಯ ಕೋರಿಯರ್‌ ಕಂಪನಿಗಳ ಮುಖಾಂತರ ದೇಶದ ವಿವಿಧ ಭಾಗಗಳಿಂದ ಅಕ್ರಮವಾಗಿ ಸಿಮ್‌ ಕಾರ್ಡ್‌ಗಳನ್ನು ಸಂಗ್ರಹಿಸಿ ವಿದೇಶಗಳಿಗೆ ಕಳ್ಳಸಾಗಣೆ ಮಾಡುವ ಜಾಲವೊಂದು ಸಕ್ರಿಯವಾಗಿರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಪೊಲೀಸರು ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮತ್ತು ಲಗೇಜ್‌ಗಳ ಮೇಲೆ ನಿಗಾ ವಹಿಸಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ವಿಮಾನ ನಿಲ್ದಾಣದ ಸಹಕಾರದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಆರೋಪಿಯು ಲಗೇಜ್‌ ಬ್ಯಾಗ್‌ ಕೆಳಗೆ ಸಿಮ್‌ ಕಾರ್ಡ್‌ಗಳನ್ನು ಬಚ್ಚಿಟ್ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಂಬೋಡಿಯಾಗೆ ಪ್ರಯಾಣ ಬೆಳೆಸಲು ಬಂದಿದ್ದ. ಲಗೇಜ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಸಿಮ್‌ ಕಾರ್ಡ್‌ಗಳನ್ನು ಬಚ್ಚಿಟ್ಟಿರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ಆರೋಪಿ ಶ್ರೀನಿವಾಸ್‌ ರಾವ್‌ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಈ ಹಿಂದೆ ಸಹ ಅಕ್ರಮವಾಗಿ ಸಿಮ್‌ ಕಾರ್ಡ್‌ಗಳನ್ನು ವಿವಿಧ ದೇಶಗಳಿಗೆ ಸಾಗಿಸಿರುವುದರ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಹಣದಾಸೆ ತೋರಿಸಿ ಸಿಮ್‌ಕಾರ್ಡ್‌ ಸಂಗ್ರಹ

ಆರೋಪಿ ನಾ.ರಾ.ಶ್ರೀನಿವಾಸ್‌ ರಾವ್‌ ಪಿಯುಸಿಗೆ ವ್ಯಾಸಂಗ ಮೊಟಕುಗೊಳಿಸಿದ್ದಾನೆ. ವಿಚ್ಚೇದಿತನಾದ ಈತನಿಗೆ ನಿರ್ದಿಷ್ಟ ಕೆಲಸವಿಲ್ಲ. ದೇಶದ ವಿವಿಧೆಡೆ ಅಮಾಯಕರಿಗೆ ಹಣದಾಸೆ ತೋರಿಸಿ, ಅವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಸುತ್ತಿದ್ದ. ಬಳಿಕ ಅವುಗಳನ್ನು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

ಸೈಬರ್‌ ವಂಚನೆಗೆ ಬಳಕೆ:

ಈ ಸಿಮ್‌ ಕಾರ್ಡ್‌ಗಳು ಸೈಬರ್‌ ವಂಚನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಕೆಯಾಗುವ ಸಾಧ್ಯತೆಯಿದೆ. ಇದರ ಹಿಂದೆ ಜಾಗತಿಕವಾಗಿ ದೊಡ್ಡ ಜಾಲವೇ ಇದ್ದು, ಹಲವರು ಇದರಲ್ಲಿ ಭಾಗಿಯಾಗಿದ್ದಾರೆ. ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!