;Resize=(412,232))
ಬೆಂಗಳೂರು : ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಮತ್ತಿನಲ್ಲಿ ಮಹಿಳೆಯರ ಜತೆ ಅನುಚಿತ ವರ್ತನೆ ತೋರುವ ಪುಂಡರೇ ಎಚ್ಚರ. ನಿಮ್ಮ ಮೇಲೆ ಸಿಸಿಟಿವಿ ಬಿಗಿ ಕಣ್ಗಾವಲಿದ್ದು, ಸಂಭ್ರಮ ಮುಗಿದು ವಾರದ ಬಳಿಕವು ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ...!
ಇಂಥ ಎಚ್ಚರಿಕೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ್ದಾರೆ. ಹೊಸ ವರ್ಷಾಚರಣೆಯ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಇದರಲ್ಲಿ ಅನುಚಿತ ವರ್ತನೆ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತರು ಗುಡುಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಯ ಜನಾಕರ್ಷಣೆಯ ಕೇಂದ್ರಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾ ನಗರ ಸೇರಿ ನಗರದ ಪ್ರಮುಖ ಸ್ಥಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಲ್ಲಿ ಫೇಸ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಸಹ ಬಳಸಲಾಗಿದ್ದು, ಕೆಲವು ಕಡೆ ಮ್ಯಾಜಿಕ್ ಬಾಕ್ಸ್ ಹಾಕಲಾಗಿದೆ. ಇದರಲ್ಲಿ ಖಾಸಗಿ ಕ್ಯಾಮೆರಾಗಳನ್ನು ಕಾರ್ಯಕ್ರಮ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕ್ಯಾಮೆರಾಗಳ ದೃಶ್ಯಾವಳಿಯನ್ನು ಸಹ ಅವಲೋಕಿಸಲಾಗುತ್ತದೆ ಎಂದು ಎಂದರು.
ಐದು ಲಕ್ಷ ಸೇರುವ ನಿರೀಕ್ಷೆ: ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಐದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರು ಸೇರಿದ್ದರು. ಹೀಗಾಗಿ ಕಳೆದ ವರ್ಷಕ್ಕಿಂತ ಇನ್ನು ಹೆಚ್ಚಿನ ಜನರು ಆಗಮಿಸಬಹುದು. ಈ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ವ್ಯಾಪ್ತಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಬ್ರಿಗೇಡ್ ರಸ್ತೆ ಪ್ರವೇಶಿಸಿದ ಬಳಿಕ ಒಪೇರಾ ಜಂಕ್ಷನ್ ಮೂಲಕ ಹೊರ ಹೋಗಬಹುದು. ಹೀಗೆ ಒಮ್ಮೆ ಹೊರ ಹೋದ ಬಳಿಕ ಮತ್ತೆ ಎಂ.ಜಿ.ರಸ್ತೆ-ಬ್ರಿಗೇಡ್ ರಸ್ತೆ ಕಾರ್ಯಕ್ರಮಕ್ಕೆ ಜನರಿಗೆ ಮರು ಪ್ರವೇಶವಿರುವುದಿಲ್ಲ.
ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿ ನಗರದಲ್ಲಿ ಎಲ್ಲೆಲ್ಲಿ ಹೆಚ್ಚೆಚ್ಚು ಜನ ಸೇರಲಿದ್ದಾರೆಯೋ ಅಲ್ಲಿ ಅತಿ ಹೆಚ್ಚು ಭದ್ರತೆ ಕೈಗೊಂಡಿದ್ದೇವೆ. ಮಫ್ತಿ ಪೊಲೀಸರು ಗಸ್ತಿನಲ್ಲಿ ಇರಲಿದ್ದಾರೆ. ವಾಚ್ ಟವರ್‌ಗಳು, ಡ್ರೋಧಿನ್ ಕ್ಯಾಮೆರಾಗಳು ಜನರ ಗುಂಪಿನ ಮೇಲೆ ನಿಗಾ ಇಡಲಿವೆ. ಪಬ್ ಹಾಗೂ ಕೆಲವು ಖಾಸಗಿ ಸಿಸಿಟಿವಿಗಳನ್ನು ನೇರವಾಗಿ ಕಮಾಂಡ್ ಸೆಂಟರ್‌ಗೆ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. ಇದರಿಂದ ಇಲಾಖೆಯ ಕ್ಯಾಮೆರಾಗಳು ಮಾತ್ರವಲ್ಲದೆ ಖಾಸಗಿ ಕ್ಯಾಮೆರಾಗಳು ಪೊಲೀಸರ ನಿಯಂತ್ರಣದಲ್ಲಿದ್ದು, ಯಾರೇ ಪುಂಡಾಟಿಕೆ ಮಾಡಿದರೂ ಸಿಕ್ಕಿಬೀಳಲಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಮಹಿಳಾ ಚಾಲಕರ ಬಳಕೆ:
ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆಟೋ ಹಾಗೂ ಕ್ಯಾಬ್‌ಗಳಿಗೆ ಹೆಚ್ಚಿನ ಮಹಿಳಾ ಚಾಲಕಿಯರನ್ನು ಬಳಸಲಾಗುತ್ತದೆ. ಈ ಕುರಿತು ಸಂಬಂಧಪಟ್ಟ ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ಸಹ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಎಂ.ಜಿ.ರಸ್ತೆ ವಾಹನ ಸಂಚಾರ ನಿರ್ಬಂಧ: ಡಿ.31 ರ ರಾತ್ರಿ 8 ರಿಂದ ಮಧ್ಯರಾತ್ರಿ 2 ಗಂಟೆವೆರೆಗೆ ಎಂ.ಜಿ.ರಸ್ತೆ ವ್ಯಾಪ್ತಿಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ. ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಸಿ ರಸ್ತೆ ಜಂಕ್ಷನ್, ಬ್ರಿಗೇಡ್ ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್, ಚರ್ಚ್ ಸ್ಟ್ರೀಟ್, ಆಶೀರ್ವಾದಮ್ ಜಂಕ್ಷನ್ ನಿಲುಗಡೆ ಮಾಡಿದೆ ದಂಡ ಬೀಳಲಿದೆ.
ಕೋರಮಂಗಲ ಸಂಚಾರ ಬಂದ್: ಕೋರಮಂಗಲದ ವೈ.ಡಿ.ಮಠ ರಸ್ತೆಯ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್, ವೈ.ಡಿಮಠ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳಲ್ಲಿ ಡಿ.31 ರಂದು ಸಂಚಾರ ನಿಷೇಧವಿದೆ.
ಖಾಕಿ ಕಾವಲಿನಲ್ಲಿ ಬಸ್ ಸಂಚಾರ
ಹೊಸ ವರ್ಷಾಚರಣೆ ಮುಗಿದ ಬಳಿಕ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಪೊಲೀಸರು ಕಲ್ಪಿಸಲಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಆಟೋ ಸಿಗದೆ ಜನರು ಪರದಾಡುತ್ತಿದ್ದರು. ಆದರೆ ಈ ಬಾರಿ ಸಾರಿಗೆ ಅಲಭ್ಯತೆ ಸಮಸ್ಯೆ ಇರುವುದಿಲ್ಲ. ಖಾಸಗಿ ಹಾಗೂ ಬಿಎಂಟಿಸಿ ಸಹಕಾರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆ ಬಸ್‌ಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
166 ಸ್ಥಳಗಳಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ
ಹೊಸ ವರ್ಷಾಚರಣೆ ಸಡಗರದಲ್ಲಿ ಮತ್ತೇರಿಸಿಕೊಳ್ಳುವವರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಇದಕ್ಕಾಗಿ ನಗರದ ವ್ಯಾಪ್ತಿ 166 ಕಡೆ ತಪಾಸಣೆ ನಡೆಸಲಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡದಂತೆ ಮನವಿ ಮಾಡಿದ್ದಾರೆ. ಹಾಗೆಯೇ 92 ಸ್ಥಳಗಳಲ್ಲಿ ವೀಲಿಂಗ್ ನಡೆಯಬಹುದು ಎಂದು ಗುರುತಿಸಿದ್ದು, ಅಲ್ಲಿಯೂ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಡಿ. 31 ರಂದು ವಿಮಾನ ನಿಲ್ದಾಣ ರಸ್ತೆ ಹೊರುತಪಡಿಸಿದರೆ ಇನ್ನುಳಿದ 50 ಮೇಲ್ಸೇತುವೆಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.