ಮಾನವ ಹಕ್ಕುಗಳ ಸಮಿತಿ ಹೆಸರಿನಲ್ಲಿ ಕಾರ್ಖಾನೆ ಮಾಲಿಕರ ಬೆದರಿಸಿ ಸುಲಿಗೆ

KannadaprabhaNewsNetwork |  
Published : Mar 22, 2024, 02:16 AM ISTUpdated : Mar 22, 2024, 01:25 PM IST
Withdrawal Money

ಸಾರಾಂಶ

ತಲೆಗೆ ಟೋಪಿ ಹಾಕಿಲ್ಲ ಎಂದು ಆಹಾರ ಉತ್ಪಾದಕ ಕಾರ್ಖಾನೆಯ ಮಾಲಿಕಗೆ ಬೆದರಿಸಿ ಹಣ ಸುಲಿಗೆ ಮಾಡಿದ ಮೂವರನ್ನು ಬಂಧಿಸಲಾಗಿದೆ. ಸುಲಿಗೆಗಾಗಿ ಮಾನವ ಹಕ್ಕು ರಕ್ಷಣಾ ಸಮಿತಿ ಹೆಸರು ಬಳಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಮಾನವ ಹಕ್ಕುಗಳ ರಕ್ಷಣ ಸಮಿತಿ ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ರವಿಚಂದ್ರ(48), ರಮೇಶ್(45) ಮತ್ತು ಪವನ್ ಕುಮಾರ್(40) ಬಂಧಿತರು. ಆರೋಪಿಗಳಿಂದ 1,879 ರು. ನಗದು ಮತ್ತು ಮಹೇಂದ್ರ ಬಲೇರೋ ವಾಹನ ಹಾಗೂ ಮೂರು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಇತ್ತೀಚೆಗೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಕಾರ್ಮಿಕರು ತಲೆಗೆ ಯಾವುದೇ ಟೋಪಿ ಧರಿಸದೆ ಕೆಲಸ ಮಾಡುತ್ತಿರುವುದು ಅಪರಾಧ ಎಂದು ಬೆದರಿಸಿ, ₹15 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. 

ಬಳಿಕ ₹10 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಆರೋಪಿಗಳು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಎಂಬ ನಕಲಿ ಸಂಘಟನೆ ಕಟ್ಟಿಕೊಂಡಿದ್ದರು. 

ತಾವು ಬಳಸುವ ಬೊಲೆರೋ ವಾಹನಕ್ಕೆ ಸಂಘಟನೆಯ ನಾಮಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದರು. ಮಾ.18ರಂದು ಸಂಘಟನೆ ಹೆಸರಿನಲ್ಲಿ ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಕೆಲ ಕಾರ್ಮಿಕರು ತಲೆ ಕೂದಲು ಉದುರದಂತೆ ರಕ್ಷಣೆಗೆ ಟೋಪಿ ಧರಿಸದಿರುವುದು ಕಂಡು ಬಂದಿದೆ. ಇದೇ ಕಾರಣ ಮುಂದಿಟ್ಟುಕೊಂಡ ಆರೋಪಿಗಳು ಕಾರ್ಖಾನೆಯಲ್ಲಿ ಸ್ವಚ್ಛತೆ ಇಲ್ಲ. 

ಕಾರ್ಮಿಕರು ತಲೆಗೆ ಟೋಪಿ ಧರಿಸಿಲ್ಲ. ಕಾನೂನು ಪ್ರಕಾರ ಇದು ಅಪರಾಧವಾಗುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಕಾರ್ಖಾನೆ ಮಾಲೀಕರನ್ನು ಬೆದರಿಸಿದ್ದಾರೆ.ಒಮ್ಮೆ ₹6 ಸಾವಿರ, ಮತ್ತೆ

4 ಸಾವಿರ ರು. ಸುಲಿಗೆ: ಪ್ರಕರಣ ದಾಖಲಿಸದೆ ಬಿಡಬೇಕಾದರೆ, ₹15 ಸಾವಿರ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಬಳಿಕ ₹6 ಸಾವಿರ ಪಡೆದು ಪರಾರಿಯಾಗಿದ್ದಾರೆ. 

ಮಾ.20ರಂದು ಮತ್ತೆ ಕಾರ್ಖಾನೆಗೆ ಬಂದಿರುವ ಆರೋಪಿಗಳು ಬಾಕಿ ₹9 ಸಾವಿರ ಕೊಡುವಂತೆ ದಬಾಯಿಸಿದ್ದಾರೆ. ಆಗ ₹4 ಸಾವಿರ ಪಡೆದು ಪರಾರಿಯಾಗಿದ್ದಾರೆ. ಈ ವೇಳೆ ಅನುಮಾನಗೊಂಡ ಕಾರ್ಖಾನೆ ಮಾಲೀಕರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಕಲಿ ಸಂಘಟನೆ ಕಟ್ಟಿಕೊಂಡು ಇದೇ ರೀತಿ ಬೆದರಿಸಿ ಹಲವರಿಂದ ಹಣ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಸುಲಿಗೆ ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು