ನಟ ಪುನೀತ್‌ ಪತ್ನಿ ಅಶ್ವಿನಿ ಬಗ್ಗೆ ಅವಹೇಳನ, ಪೊಲೀಸರಿಗೆ ದೂರು

KannadaprabhaNewsNetwork | Updated : Apr 06 2024, 05:03 AM IST

ಸಾರಾಂಶ

ಆರ್‌ಸಿಬಿ ಸೋಲಿಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಕಾರಣ ಎಂದು ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಲಾಗಿದೆ. ಈ ಸಂಬಂಧ ಅಭಿಮಾನಿಗಳು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

 ಬೆಂಗಳೂರು :  ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್ ಕುಮಾರ್‌ ಅವರ ಪತ್ನಿ ಅಶ್ವಿನಿ ಅವರ ಕುರಿತು ಅವಹೇಳನಕಾರಿಯಾಗಿ ಬರಹ ಪ್ರಕಟಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಶುಕ್ರವಾರ ದೂರು ಸಲ್ಲಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಯಾನಂದ್ ಅವರನ್ನು ಭೇಟಿಯಾದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಮುಖಂಡರು, ತಪ್ಪಿತಸ್ಥನನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಮಾ.19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಜೆರ್ಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ ಕುಮಾರ್ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಐಪಿಎಲ್‌ನ ಕೆಲ ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ಸೋತ ಕಾರಣಕ್ಕೆ ಅಶ್ವಿನಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಿಂದಿಸಿದ್ದಾರೆ ಎಂದು ಕಿಡಿಕಾರಿದರು.

ಟ್ವಿಟರ್‌ನಲ್ಲಿ ನಟ ದರ್ಶನ್‌ ಅಭಿಮಾನಿಗಳು ‘ಗಜಪಡೆ’ ಎಂಬ ನಕಲಿ ಖಾತೆಯನ್ನು ಸೃಷ್ಟಿಸಿ ಆರ್‌ಸಿಬಿ ಸೋಲಿಗೆ ಅಶ್ವಿನಿ ಅವರನ್ನು ಜೆರ್ಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಕಾರಣ ಎಂದು ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯನ್ನು ಸುದೀಪ್ ಅಭಿಮಾನಿ ಎಂದು ಬದಲಾಯಿಸಿದ್ದಾರೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಹಾಗೂ ಸುದೀಪ್‌ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಅಶಾಂತಿಗೆ ಕಾರಣರಾಗಿದ್ದಾರೆ. ಅಲ್ಲದೆ ಅಶ್ವಿನಿ ಪುನೀತ್ ರಾಜ್‌ ಕುಮಾರ್ ಹಾಗೂ ಸುದೀಪ್ ಅವರಿಗೆ ಅವಮಾನ ಮಾಡಿದ್ದಾರೆ. ಈ ದುಷೃತ್ಯ ಎಸಗಿರುವವನ್ನು ಶೀಘ್ರವೇ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಅಪ್ಪು ಹುಡುಗರು ಸಂಘದ ಉಪಾಧ್ಯಕ್ಷ ಶ್ರೀನಿವಾಸ್ (ಪುನೀತ್ ರಾಕಿ ಜಾಕಿ) ಒತ್ತಾಯಿಸಿದ್ದಾರೆ.

Share this article