ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಇದೀಗ ಅವರ ಪತ್ನಿ ಮಂಜುಳಾ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ನಾಗೇಂದ್ರ ಹಾಗೂ ಕುಟುಂಬಸ್ಥರ ಖಾತೆಗಳ ಮೇಲೆ ಇ.ಡಿ. ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ತನಿಖೆ ವೇಳೆ ನಾಗೇಂದ್ರಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿಕ್ಕ ಮಾಹಿತಿಯ ಅನ್ವಯ ಇ.ಡಿ. ಅಧಿಕಾರಿಗಳು ಮಂಜುಳಾ ಅವರನ್ನು ಪ್ರಶ್ನಿಸಿದ್ದಾರೆ. ಹಣಕಾಸು ವ್ಯವಹಾರ ಸಂಬಂಧ ಮಂಜುಳಾ ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಮೇರೆಗೆ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ನಗರದ ಬಿಇಎಲ್ ರಸ್ತೆಯಲ್ಲಿ ಇರುವ ರಾಮ್ಕಿ ಉತ್ಸವ್ ಅಪಾರ್ಟ್ಮೆಂಟ್‌ಗೆ ತೆರಳಿದ ಇ.ಡಿ. ಅಧಿಕಾರಿಗಳು ಮನೆಯಲ್ಲಿಯೇ ವಿಚಾರಣೆ ನಡೆಸಿದರು. ಸುಮಾರು ಒಂದು ತಾಸಿಗಿಂತ ಹೆಚ್ಚು ಕಾಲ ವಿಚಾರಣೆ ನಡೆಸಿದರೂ ಸಮರ್ಪಕವಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮಂಜುಳಾ ಅವರನ್ನು ವಶಕ್ಕೆ ಪಡೆದು ಶಾಂತಿನಗರದಲ್ಲಿನ ಇ.ಡಿ. ಕಚೇರಿಗೆ ಕರೆತಂದು ವಿಚಾರಣೆಗೊಳಪಡಿಸಿ ಬಳಿಕ ಬಿಟ್ಟು ಕಳುಹಿಸಿದರು.
ನಾಗೇಂದ್ರ ಬ್ಯಾಂಕ್ ವಹಿವಾಟನ್ನು ತನಿಖೆಗೊಳಪಡಿಸಿದಾಗ ಪತ್ನಿ ಖಾತೆಗೆ ಕೋಟ್ಯಂತರ ಹಣವನ್ನು ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಮಂಜುಳಾ ಹೆಸರಿನಲ್ಲಿ ಬೇನಾಮಿ ಖಾತೆಗಳನ್ನು ತೆರೆದು ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಮೇರೆಗೆ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಈ ಸಂಬಂಧ ಹಲವು ರೀತಿಯಲ್ಲಿ ಪ್ರಶ್ನಿಸಲಾಗಿದೆ. ಈ ನಡುವೆ, ನಾಗೇಂದ್ರ ಆಪ್ತರಾದ ಹರೀಶ್ ಮತ್ತು ದೇವೇಂದ್ರಪ್ಪ ಅವರನ್ನು ಗುರುವಾರ ಪ್ರಶ್ನಿಸಲಾಗಿತ್ತು. ಈ ವೇಳೆಯಲ್ಲಿಯೂ ನಾಗೇಂದ್ರ ಪತ್ನಿಯ ಖಾತೆಗೆ ಹಣ ವರ್ಗಾವಣೆ ಕುರಿತು ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.