ಹುಲಿ ಉಗುರಿಗಾಗಿ ಕಚೇರಿಗೆ ಗುರೂಜಿ ಕರೆ ತಂದ ಅಧಿಕಾರಿಗಳು

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಹುಲಿ ಉಗುರು ಸಂಬಂಧ ಅರಣ್ಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಿದನಗೆರೆ ಸತ್ಯ ಶನೇಶ್ವರ ದೇವಾಲಯ ಮನೆ ಸೇರಿದಂತೆ ಸ್ವಾಮೀಜಿಯ ವಶದಲ್ಲಿರುವ ಕಾರು ಹಾಗೂ ಇತರ ಖಾಸಗಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್: ಹುಲಿ ಉಗುರು ಸಂಬಂಧ ಅರಣ್ಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಿದನಗೆರೆ ಸತ್ಯ ಶನೇಶ್ವರ ದೇವಾಲಯ ಮನೆ ಸೇರಿದಂತೆ ಸ್ವಾಮೀಜಿಯ ವಶದಲ್ಲಿರುವ ಕಾರು ಹಾಗೂ ಇತರ ಖಾಸಗಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು. ಜಿಲ್ಲಾ ಅರಣ್ಯಾಧಿಕಾರಿ ಹಾಗೂ ಉಪ ಅರಣ್ಯಾಧಿಕಾರಿ ಕುಣಿಗಲ್ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ 15 ಜನ ಅರಣ್ಯ ಸಿಬ್ಬಂದಿ ದಿನಪೂರ್ತಿ ತಪಾಸಣೆ ನಡೆಸಿದರು. ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶ ಮತ್ತು ಸ್ವಾಮೀಜಿಗೆ ಸೇರಿದ ಜಾಗಗಳಲ್ಲಿ ಹುಲಿ ಉಗುರಿನ ಪತ್ತೆ ಆಗದ ಹಿನ್ನೆಲೆಯಲ್ಲಿ ಗುರೂಜಿಯನ್ನು ಅರಣ್ಯ ಕಚೇರಿಗೆ ಕರೆ ತರಲಾಗಿದೆ. ಈ ಸಂಬಂಧ ತನಿಖೆ ಹಂತದಲ್ಲಿ ಸಹಕರಿಸುವಂತೆ ಮತ್ತು ಇಲಾಖೆಯ ಪರವಾನಿಗೆ ಇಲ್ಲದೆ ಕೇಂದ್ರ ಸ್ಥಳ ಬಿಟ್ಟು ಹೋಗದಂತೆ ನೋಟಿಸ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯಾಧಿಕಾರಿ ಹಲವಾರು ಆಯಾಮಗಳಲ್ಲಿ ತನಿಕೆಯನ್ನು ಮುಂದುವರಿಸಲಾಗುತ್ತಿದೆ. ಗುರೂಜಿ ಚಾಲಕ ಸಹಾಯಕ ಸೇರಿದಂತೆ ಪ್ರತಿಯೊಬ್ಬರ ಹೇಳಿಕೆಗಳನ್ನು ಪ್ರತ್ಯೇಕವಾಗಿ ಪಡೆಯಲಾಗುತ್ತಿದೆ. ತನಿಖೆಯನ್ನು ಇನ್ನೂ ಕೂಡ ಮುಂದುವರಿಸುತ್ತೇವೆ. ತನಿಖೆ ಹಂತದಲ್ಲಿ ಎಲ್ಲಾ ವಿಚಾರಗಳನ್ನು ಕೂಡ ಮಾಧ್ಯಮಕ್ಕೆ ತಿಳಿಸಲು ಸಾಧ್ಯವಿಲ್ಲ. ಹುಲಿ ಉಗುರು ಇದೆ, ಇಲ್ಲ ಎಂಬುದರ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧನಂಜಯ ಸ್ವಾಮೀಜಿ ತನಿಖೆಗೆ ಎಲ್ಲ ರೀತಿಯಲ್ಲಿ ನಾನು ಸಹಕಾರ ನೀಡುತ್ತೇನೆ. ನಾನು, ಬಳಸಿದ್ದು ನಕಲಿ ಎಂಬುದು ನನಗೆ ಕೂಡ ಮನವರಿಕೆ ಆಗಿದೆ. ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದರು ಕೂಡ ನಾನು, ನನ್ನ ನಿಲುವನ್ನು ಬದಲಿಸುವುದಿಲ್ಲ. ನನ್ನ ವ್ಯಾಪ್ತಿಯಲ್ಲಿ ನಿಜವಾದ ಹುಲಿ ಉಗುರು ಸಿಕ್ಕರೆ ನಾನು, ಕಾನೂನು ಪ್ರಕಾರ ನ್ಯಾಯಾಂಗ ಹೇಳುವ ಸೂಚನೆಯನ್ನು ಪಾಲಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಪೋಟೋ ಇದೆ :26ಕೆಜಿಎಲ್‌1: ಹುಲಿ ಉಗುರಿಗಾಗಿ ಕಚೇರಿಗೆ ಗುರುಜಿ ಕರೆತಂದ ಅಧಿಕಾರಿಗಳು

Share this article