ದಾವಣಗೆರೆ : ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಅದು ಮೇಕೆಯ ಮಾಂಸ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಸ್ಥಾನದಿಂದ ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಕೆಲವರ ವೃತ್ತಿಯಾಗಿದೆ. ಆದರೆ, ಯಾರೋ ಹೋಗಿ ಅದು ನಾಯಿ ಮಾಂಸ ಅಂತಾ ಹೇಳಿ, ಅನಾವಶ್ಯಕವಾಗಿ ಆರೋಪ ಮಾಡಿ, ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಪ್ರಯೋಗಾಲಯದ ವರದಿ ಬಂದಿದ್ದು, ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸವೆಂಬುದಾಗಿ ತಿಳಿದು ಬಂದಿದೆ ಎಂದರು.
ಯಾರೇ ಆಗಲಿ ಅನಾವಶ್ಯಕ, ದುರುದ್ದೇಶದಿಂದ ಗಲಾಟೆ ಮಾಡಲು ಮುಂದಾದರೆ ಸುಮ್ಮನೆ ಕೂಡುವುದಕ್ಕೆ ಸಾಧ್ಯವಿಲ್ಲ. ಅದರ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹಿಂದು ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನವನ್ನು ಗೃಹ ಸಚಿವರು ಸಮರ್ಥಿಸಿಕೊಂಡರು.
ಬಿಜೆಪಿಯವರ ಪಾದಯಾತ್ರೆ ಹಾಸ್ಯಾಸ್ಪದ;
ಇದೇ ವೇಳೆ, ಮುಡಾ ಹಗರಣ ಸಂಬಂಧ ಬಿಜೆಪಿಯವರು ಮಾಡುತ್ತಿರುವ ಪಾದಯಾತ್ರೆಯನ್ನು ಟೀಕಿಸಿದ ಸಚಿವರು, ನಾವು ಹಿಂದೆ ರಾಜ್ಯದ ಸಂಪತ್ತನ್ನೇ ಲೂಟಿ ಮಾಡುತ್ತಿದ್ದ, ಅಕ್ರಮ ಗಣಿಗಾರಿಕೆಯಿಂದ ಮೆರೆಯುತ್ತಿದ್ದ ಬಿಜೆಪಿಯವರ ವಿರುದ್ಧ ಪಾದಯಾತ್ರೆ ನಡೆಸಿದ್ದೇವೆ. ಬಿಜೆಪಿ ವಿರುದ್ಧ ಹಿಂದೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ನಿಜಾಂಶ ಇತ್ತು. ರಾಜ್ಯದ ಸಂಪತ್ತನ್ನು ಉಳಿಸುವ ಸದುದ್ದೇಶದಿಂದ ಕೈಗೊಂಡಿದ್ದ ಪಾದಯಾತ್ರೆ ಅದಾಗಿತ್ತು. ಆದರೆ, ಇಂದು ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಹೊರಿಸಿ, ಪಾದಯಾತ್ರೆ ನಡೆಸಲು ಬಿಜೆಪಿಯವರು ಹೊರಟಿದ್ದಾರೆ ಎಂದರು.
ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ವಿನಾಕಾರಣ ಆರೋಪ ಮಾಡುತ್ತಿವೆ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಕಾನೂನುಬಾಹಿರ ಕೆಲಸವನ್ನೂ ನಡೆಸಿಲ್ಲ. ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ಪೃಥ್ವಿ ವೀಡಿಯೋ ಬಗ್ಗೆ ಸೂಕ್ತ ತನಿಖೆ:
ನ್ಯಾಯ ಸಿಗದಿದ್ದರೆ ಭಯೋತ್ಪಾದಕನಾಗುವೆ ಎಂಬುದಾಗಿ ಪೃಥ್ವಿ ಎಂಬ ಹೆಸರಿನ ಯುವಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಲಾಗುವುದು. ಯಾವುದೇ ಪೊಲೀಸ್ ಠಾಣೆಯಲ್ಲಿ ಅನಾವಶ್ಯಕ ತೊಂದರೆ ಮಾಡಿದ್ದರೆ ಇಲಾಖೆ ತನಿಖೆ ನಡೆಸುತ್ತದೆ. ಪೊಲೀಸರದ್ದೇ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಖಚಿತ ಎಂದು ಸಚಿವರು ತಿಳಿಸಿದರು.